×
Ad

ಕೇಂದ್ರದಿಂದ ಯೋಜನೆಗೆ ಪ್ರಥಮ ಹಂತದ 200 ಕೋಟಿ ರೂ. ಬಿಡುಗಡೆ ಸಾಧ್ಯತೆ

Update: 2016-09-21 22:23 IST

<ಬಿ. ರೇಣುಕೇಶ್

ಶಿವಮೊಗ್ಗ, ಸೆ. 21: ಕೇಂದ್ರ ಸರಕಾರದ ಪ್ರತಿಷ್ಠಿತ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ 2015 ರಲ್ಲಿ ದೇಶಾದ್ಯಂತ ಆಯ್ಕೆ ಮಾಡಲಾಗಿದ್ದ 100 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಶಿವಮೊಗ್ಗ ನಗರವು, ಇದೀಗ ಯೋಜನೆ ಯಡಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮಲೆನಾಡ ನಗರಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ‘ಸಾ್ಮರ್ಟ್‌ಸಿಟಿ’ ಯೋಜನೆಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನಗರವು ಸ್ಥಾನ ಪಡೆದುಕೊಂಡಿ ರುವುದರಿಂದ, ಕೇಂದ್ರ ಸರಕಾರವು ಪ್ರಥಮ ಹಂತದಲ್ಲಿ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಯೋಜನೆಯ ಅನುಷ್ಠಾನ, ಪ್ರಗತಿ ವರದಿಯ ಆಧಾರದ ಮೇಲೆ ಮುಂದಿನ ಮೂರು ವರ್ಷಗಳ ಕಾಲ ತಲಾ 100 ಕೋಟಿ ರೂ. ಅನು

ದಾನ ಬಿಡುಗಡೆ ಮಾಡಲಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡುವ ಅನುದಾನಕ್ಕೆ ಅನುಗುಣವಾಗಿ ರಾಜ್ಯ ಸರಕಾರ ಅಷ್ಟೇ ಮೊತ್ತದ ಅನುದಾನವನ್ನು ‘ಸ್ಮಾರ್ಟ್ ಸಿಟಿ’ ಯೋಜನೆಗೆ ಆಯ್ಕೆಯಾದ ನಗರಗಳಿಗೆ ಬಿಡುಗಡೆ ಮಾಡಬೇಕು. ಒಟ್ಟಾರೆ 5 ವರ್ಷಗಳ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ತಲಾ 1, 000 ಕೋಟಿ ರೂ. ಅನುದಾನ ಲಭ್ಯವಾಗಲಿದೆ ಎಂದು ನಗರಾಭಿವೃದ್ದಿ ಇಲಾಖೆಯ ಅಧಿಕಾರಿಯೋರ್ವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಘಟಕ ಸ್ಥಾಪನೆ: ‘ಸ್ಮಾರ್ಟ್ ಸಿಟಿ’ ಯೋಜನೆಯ ಅನುಷ್ಠಾನಕ್ಕಾಗಿ ವಿಶೇಷ ವಾಹಕ ಘಟಕ (ಎಸ್.ವಿ.ಪಿ.) ರಚನೆ ಮಾಡಲಾಗುತ್ತದೆ. ಈ ಘಟಕದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಅಥವಾ ಐಎಎಸ್ ದರ್ಜೆಯ ಪ್ರತ್ಯೇಕ ಅಧಿಕಾರಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಈ ಘಟಕದಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಇತರ ವಿಭಾಗಗಳ ಅಧಿಕಾರಿಗಳು ಇರುತ್ತಾರೆ. ‘ಸ್ಮಾರ್ಟ್ ಸಿಟಿ’ಗೆ ಸಂಬಂಧಿಸಿದಂತೆ ಪ್ರತ್ಯೇಕ ಕಚೇರಿ ತೆರೆಯಲಾಗುತ್ತದೆ. ಈಗಾಗಲೇ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಹಂತಹಂತವಾಗಿ ಈ ಘಟಕ ಕ್ರಮಕೈಗೊಳ್ಳಲಿದೆ. ಸಹಬಾಗಿತ್ವ:

ಯೋಜನೆಯಡಿ ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಯೋಜನೆಗಳ ಅನುಷ್ಠಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ದೇಶ-ವಿದೇಶಗಳ ದೊಡ್ಡ ದೊಡ್ಡ ಉದ್ದಿಮೆದಾರರು, ಕಂಪೆನಿಗಳು ‘ಸ್ಮಾರ್ಟ್ ಸಿಟಿ’ಗಳಲ್ಲಿ ಬಂಡವಾಳ ಹೂಡಲು ಮುಂದೆ ಬರಲಿವೆ. ಶಿವಮೊಗ್ಗ ನಗರದಲ್ಲಿಯೂ ಹಲವು ವಿದೇಶಿ ಕಂಪೆನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಸಕ್ತಿವಹಿಸಿವೆ. ಯಾವೆಲ್ಲಾ ವಿದೇಶಿ ಕಂಪೆನಿಗಳು ನಗರಕ್ಕಾಗಮಿಸಲಿವೆ ಎಂಬುದರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

 ದಕ್ಷ ತಂಡ ಅಗತ್ಯ:  ‘ಸ್ಮಾರ್ಟ್ ಸಿಟಿ’ ಯೋಜನೆಯ ಅನುಷ್ಠಾನಕ್ಕೆ ದಕ್ಷ-ಪ್ರಾಮಾಣಿಕ, ನೇರ-ನಿರ್ಭೀಡತೆಯಿಂದ ಕಾರ್ಯನಿರ್ವಹಿಸುವ ದಕ್ಷ ಅಧಿಕಾರಿಗಳ ತಂಡ ಬೇಕಾಗಿದೆ. ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳ ಮೇಲೆ ಮಹತ್ವದ ಜವಾಬ್ದಾರಿಯಿರಲಿದೆ. ಅಧಿಕಾರಿಗಳ ತಂಡ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಿದರೆ ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗದ ಚಿತ್ರಣ ಬದಲಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ರವಿಗೆ ಅಭಿನಂದನೆಗಳ ಮಹಾಪೂರ:

ಶಿವಮೊಗ್ಗ ನಗರವು ‘ಸ್ಮಾರ್ಟ್ ಸಿಟಿ’ ಯೋಜನೆಗೆ ಆಯ್ಕೆಯಾಗಲು ಈ ಹಿಂದಿನ ಮಹಾನಗರ ಪಾಲಿಕೆ ಆಯುಕ್ತ ಎ.ಆರ್. ರವಿ ಅವರ ಶ್ರಮ ಅಪಾರವಾದುದು. ಅವರು ಪಾಲಿಕೆ ಆಯುಕ್ತರಾಗಿ ಬಂದ ಬಳಿಕ ಕರ ಸಂಗ್ರಹಣೆಗೆ, ಇ-ಆಡಳಿತಕ್ಕೆ ಆದ್ಯತೆ ಕೊಟ್ಟರು. ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ ತರಲು ಯತ್ನಿಸಿದರು. ಭ್ರಷ್ಟಾಚಾರ, ಅವ್ಯವಹಾರಗಳಿಗೆ ಕಡಿವಾಣ ಹಾಕಿದರು. ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ದೇಶಾದ್ಯಂತ ನಗರಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದಾಗ ಕೇಂದ್ರ ಸರಕಾರ ಆಯಾ ನಗರಗಳ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಅನುಷ್ಠಾನ ಮಾಡಲಾಗಿರುವ ಇ-ಆಡಳಿತ ವ್ಯವಸ್ಥೆ, ಕರ ಸಂಗ್ರಹಣೆಯ ವಿವರ, ಪಾಲಿಕೆಯಿಂದ ನಾಗರಿಕರಿಗೆ ನೀಡಲಾಗುತ್ತಿರುವ ಸೇವೆಗಳು ಸೇರಿದಂತೆ ಇತರ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಿತ್ತು. ಎ.ಆರ್. ರವಿ ಅವರ ದಕ್ಷ ಕಾರ್ಯವೈಖರಿಯಿಂದ ಈ ಎಲ್ಲ ಮಾನದಂಡಗಳಲ್ಲಿ ಶಿವಮೊಗ್ಗವು ತೇರ್ಗಡೆಯಾಗಿತ್ತು. ಇದರಿಂದ 2015ರಲ್ಲಿ ಕೇಂದ್ರ ಸರಕಾರ ೞಸ್ಮಾರ್ಟ್ ಸಿಟಿೞಯೋಜನೆಯಡಿ 100 ನಗರಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದಾಗ ಶಿವಮೊಗ್ಗ ನಗರವು ಬೆಂಗಳೂರು, ಮೈಸೂರಿನಂತಹ ಮಹಾನಗರಗಳನ್ನು ಹಿಂದಿಕ್ಕಿ ಯೋಜನೆಯಡಿ ಸ್ಥಾನ ಪಡೆದುಕೊಳ್ಳುವ ಸಣ್ಣ ನಿರೀಕ್ಷೆಯೂ ಇಲ್ಲದ ಇಡೀ ರಾಜ್ಯವೇ ನಗರದ ಸಾಧನೆಯನ್ನು ಮನಗಂಡು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಅಭಿನಂದನೆ: ಯೋಜನೆಯಡಿ ಅಭಿವೃದ್ಧಿ ಪ್ರಕ್ರಿಯೆಗೆ ಶಿವಮೊಗ್ಗ ನಗರ ಆಯ್ಕೆಯಾಗುತ್ತಿದ್ದಂತೆ ಈ ಹಿಂದಿನ ಆಯುಕ್ತ, ಪ್ರಸ್ತುತ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಆರ್.ರವಿಯವರಿಗೆ ಶಿವಮೊಗ್ಗದ ಜನಪ್ರತಿನಿಧಿಗಳು, ನಾಗರಿಕರು, ಸಂಘಸಂಸ್ಥೆಗಳ ಮುಖಂಡರು ಅವರ ಮೊಬೈಲ್‌ಗೆ ಕರೆ ಮಾಡಿ ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News