×
Ad

ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Update: 2016-09-22 21:22 IST

ಕಾರವಾರ, ಸೆ.22: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಆಯಾ ತಾಲೂಕಿನ ಸಾರ್ವಜನಿಕರು ಎಷ್ಟೇ ಪ್ರತಿಭಟನೆ, ದೂರುಗಳು ಸಲ್ಲಿಸಿದರೂ ಕ್ರಮಕೈಗೊಳ್ಳುತ್ತಿಲ್ಲ. ತಕ್ಷಣ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸರಕಾರ ಅಬಕಾರಿ ಇಲಾಖೆಗೆ ಮದ್ಯ ಮಾರಾಟಕ್ಕೆ ಗುರಿ ನಿಗದಿ ಮಾಡುತ್ತದೆ. ಇದರಿಂದ ಅಬಕಾರಿ ಅಧಿಕಾರಿಗಳು ಅಕ್ರಮ ಅಡ್ಡೆಗಳನ್ನು ತಡೆಯಲು ಪ್ರಯತ್ನ ಮಾಡುತ್ತಿಲ್ಲ, ಇದರಿಂದ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಅಕ್ರಮ ಮದ್ಯದ ಹಾವಳಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು ಮದ್ಯಮುಕ್ತ ಸಮಾಜವನ್ನಾಗಿಸಲು ಪ್ರಯತ್ನಿಸುತ್ತಿರುವ ಸಂಘಟನೆಗಳಿಗೆ ಸಹಕಾರ ನೀಡುವಂತೆ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮನವಿ ಸ್ವೀಕರಿಸಿದರು. ನಿಯೋಗದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕರಾವಳಿ ಭಾಗದ ಅಧ್ಯಕ್ಷ ಗಂಗಾಧರ ಭಟ್, ಶಿರಸಿ ವಿಭಾಗದ ಅಧ್ಯಕ್ಷ ಡಿ.ಎನ್. ಗಾಂವ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ., ಮಾಜಿ ಜಿಲ್ಲಾಧ್ಯಕ್ಷ ಯೋಗಾನಂದ ಗಾಂಧಿ, ನಾಗರತ್ನಾ ಹೆಗಡೆ, ಸಮಾಜ ಸೇವಕಿ ಅನು ಕಳಸ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News