ಆಳ್ವಾಸ್ ಬಾಲಕ -ಬಾಲಕಿಯರ ತಂಡ ಚಾಂಪಿಯನ್
ಕಾರವಾರ, ಸೆ.22: ನಗರದ ಮಾಲಾದೇವಿ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಬಾಲಕ-ಬಾಲಕಿಯರ ತಂಡ ಅಂತಿಮ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಗುರುವಾರದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜಿನ ಬಾಲಕರ ತಂಡ, ಮಡಿಕೇರಿ ತಂಡವನ್ನು ಮೊದಲ ಸುತ್ತಿನಲ್ಲಿ 29-6 ಹಾಗೂ ಎರಡನೆ ಸುತ್ತಿನಲ್ಲಿ 29-4ಅಂತರಗಳಿಂದ ಮಣಿಸಿತು. ಅದರಂತೆ ಆಳ್ವಾಸ್ ಬಾಲಕಿಯರ ತಂಡ ಹಾಸನ ತಂಡದೊಂದಿಗೆ ಮುಖಾಮುಖಿಯಾಗಿ ಮೊದಲ ಸುತ್ತಿನಲ್ಲಿ 29-1 ಹಾಗೂ ಎರಡನೆ ಸುತ್ತಿನಲ್ಲಿ 29-3ರ ಅಂತರದಲ್ಲಿ ಸುಲಭವಾಗಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಆಳ್ವಾಸ್‌ನ ಬಾಲಕ ಹಾಗೂ ಬಾಲಕಿಯರ ತಂಡಗಳು ಸತತ 11ನೆ ಬಾರಿಗೆ ರಾಜ್ಯ ಮಟ್ಟದ ಚಾಂಪಿಯನ್ ಪಟ್ಟ ಪಡೆದುಕೊಳ್ಳುತ್ತಿವೆೆ. ಈ ಎರಡು ತಂಡಗಳು ಅ.3ರಿಂದ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿವೆೆ. ಕಳೆದ ಬಾರಿ ತಮಿಳುನಾಡಿನ ಸೇಲಂನಲ್ಲಿ ನಡೆದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ತಂಡ ಎರಡನೆ ಸ್ಥಾನ ಪಡೆದುಕೊಂಡಿತ್ತು. ಪ್ರಶಸ್ತಿ ಪ್ರದಾನ:
ತಾಲೂಕಿನ ಸಿದ್ದರದ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನ ನೇತೃತ್ವದಲ್ಲಿ ಮಾಲಾದೇವಿ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಾಲಕರ 28 ಹಾಗೂ ಬಾಲಕಿಯರ 27 ತಂಡಗಳು ಪಾಲ್ಗೊಂಡಿದ್ದವು. ವಿಜೇತ ತಂಡಗಳಿಗೆ ಮಾಜಿ ಸಚಿವ ಪ್ರಭಾಕರ ರಾಣೆ ಬಹುಮಾನಗಳನ್ನು ವಿತರಿಸಿದರು.