ರಸ್ತೆ ದುರಸ್ತಿಗೆ ಒತ್ತಾಯಿಸಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ
ಕಳಸ, ಸೆ.22: ಕಳೆದ ದಶಕಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕ ಓಡಾಟಕ್ಕೆ ಅಯೋಗ್ಯವಾಗಿದ್ದ ಕಳಸ ಮಹಾವೀರ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಕರವೇ ಕಳಸ ಹೋಬಳಿ ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಮಹಾವೀರ ರಸ್ತೆಯ ಅಂಚಿನಲ್ಲಿರುವ ವರ್ತಕರು, ಸಿಪಿಐ ಮುಖಂಡರು ಹಾಗೂ ಕರವೇ ಸದಸ್ಯರು ಮಹಾವೀರ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ನಂತರ ಕೆ.ಎಂ ರಸ್ತೆಯಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಮಾಜಿ ಅಧ್ಯಕ್ಷ ವಿಶ್ವನಾಥ ಮಾತನಾಡಿ, ಕಳೆದ ದಶಕಗಳಿಂದ ಈ ರಸ್ತೆಯ ಅವ್ಯವಸ್ಥೆಯಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ಹೊಂಡ ಗುಂಡಿಯನ್ನು ಮುಚ್ಚಿ ಜನರ ಕಣ್ಣೊರೆಸುವ ತಂತ್ರವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಈ ರಸ್ತೆಯ ಸಂಪೂರ್ಣ ದುರಸ್ತಿಯನ್ನು ಮಾಡಲು ಯಾವ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಆದಷ್ಟು ಬೇಗನೆ ಕಾಮಗಾರಿ ಮಾಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಮಾತನಾಡಿ, ಆದಷ್ಟು ಬೇಗನೆ ರಸ್ತೆ ನಿರ್ಮಿಸಿ ಸಾರ್ವಜನಿಕರ ಹಿತವನ್ನು ಕಾಪಾಡಬೇಕು ಎಂದರು.
ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ವೈಯಕ್ತಿಕ ಅನುದಾನದಿಂದ ಈ ರಸ್ತೆಗೆ ಜಲ್ಲಿ, ಸಿಮೆಂಟ್, ಕ್ರಷರ್ ಮಿಶ್ರಣವನ್ನು ಹಾಕಿಸಿ ತಾತ್ಕಾಲಿಕ ಮಟ್ಟಕ್ಕೆ ಕಾಮಗಾರಿಯನ್ನು ನಡೆಸುತ್ತೇನೆ. ಅಲ್ಲದೆ ನಂತರ ದಿನಗಳಲ್ಲಿ ಈ ರಸ್ತೆಯ ಕಾಂಕ್ರೀಟಿಕರಣಕ್ಕೆ ಬೇಕಾಗುವ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಳಸ ಹೋಬಳಿ ಕರವೇ ಅಧ್ಯಕ್ಷ ಉಮೇಶ್ ಗಾಳಿಗಂಡಿ, ನೆಲ್ಲಿಬೀಡು ಘಟಕದ ಅಧ್ಯಕ್ಷ ತೇಜಸ್, ಸಿಪಿಐ ಮುಖಂಡ ಲಕ್ಷ್ಮಣಾಚರ್ ಪ್ರಮುಖರಾದ ಶ್ರೇಣಿಕ್, ಅಬ್ದುಲ್ ಶುಕುರ್, ಮೊಹಿದ್ದೀನ್ ಬಾವ, ದಿನೇಶ್, ಅನಿಲ್ ಭಂಡಾರಿ, ಮಹೇಶ್ ಕೆ.ಸಿ.ವೀರೇಂದ್ರ, ಸುಧೀರ್ ಭಂಡಾರಿ, ಶರೀಫ್, ಪ್ರವೀಣ್, ಸುನಿಲ್, ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.