×
Ad

ವರ್ಷವಿಡೀ ದುಡಿಯುವ ವರ್ಗಕೆ ಹರ್ಷದ ದಿನಾಚರಣೆ:ಎಚ್.ಡಿ.ತಮ್ಮಯ್ಯ

Update: 2016-09-22 21:58 IST

ಚಿಕ್ಕಮಗಳೂರು, ಸೆ.22: ಸ್ವಚ್ಛತೆ ಮೂಲಕ ನಗರದ ಜನರ ಹಿತ ಕಾಯುತ್ತ ವರ್ಷವಿಡೀ ದುಡಿಯುವ ಪೌರಕಾರ್ಮಿಕರಿಗೆ ಕ್ರೀಡೆಗಳ ಮೂಲಕ ಹರ್ಷದ ದಿನವಾಗಲಿ ಎಂದು ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಹೇಳಿದರು.

  ಅವರು ಗುರುವಾರ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವರ್ಷದಲ್ಲಿ ಒಂದು ದಿನವೂ ವಿಶ್ರಮಿಸದೆ ನಗರದ ಸ್ವಚ್ಚತೆಯೊಂದಿಗೆ ಸದಾ ಜನರ ಆರೋಗ್ಯಕ್ಕೆ ಶ್ರಮಿಸುವ ಪೌರಕಾರ್ಮಿಕರು ವೃತ್ತಿ ಜೀವನದಲ್ಲಿ ಎಲ್ಲ ಕನಸುಗಳನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪೌರ ಕಾರ್ಮಿಕರು ಊರಿನ ಸ್ವಚ್ಚತೆ ಕಾಪಾಡುವ ಜೊತೆ ತಮ್ಮ ಕುಟುಂಬದ ಆರೋಗ್ಯ ಕಾಪಾಡುವುದರಲ್ಲೂ ಎಚ್ಚರಿಕೆ ವಹಿಸಬೇಕು ಎಂದು ನುಡಿದರು.

ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿಸುವ ಜವಾಬ್ದಾರಿ ಅರಿತು ತಮಗೆ ಬರುವ ಸಂಬಳದಲ್ಲಿ ದುಂದುವೆಚ್ಚ ಮಾಡದೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.

   ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಬಿ.ಅಣ್ಣಯ್ಯ ಮಾತನಾಡಿ, ಪೌರಸೇವಾ ನೌಕರರ ಸಂಘ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಈ ಕ್ರೀಡಾಕೂಟ ಹಮ್ಮಿಕೊಂಡಿದ್ದು ಪಾಸಿಂಗ್ ದ ಬಾಲ್, ಕಬ್ಬಡಿ, ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಗುತ್ತಿಗೆ ಹಾಗೂ ಖಾಯಂ ನೌಕರರು ಸೇರಿದಂತೆ 200ಕ್ಕೂ ಹೆಚ್ಚು ಪೌರ ಕಾರ್ಮಿಕರು ಪಾಲ್ಗೊಂಡು ಪರಸ್ಪರ ಕ್ರೀಡಾ ಆಟಗಳಲ್ಲಿ ತೊಡಗಿ ಸಂಭ್ರಮಿಸಿದ್ದಾರೆ. ಕ್ರೀಡಾಕೂಟಕ್ಕೆ ನಗರಸಭೆ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.

  ನಗರಸಭೆ ಸದಸ್ಯರಾದ ಅಫ್ಸರ್ ಅಹ್ಮದ್, ನರಸಿಂಹ, ಪೌರಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿ.ಗುರುಮೂರ್ತಿ, ಶಾಖಾ ಸಂಘದ ಕಾರ್ಯದರ್ಶಿ ರಮೇಶ್‌ಬಾಬು, ಶ್ರೀನಿವಾಸ್, ಎನ್.ಅಣ್ಣಯ್ಯ, ಎನ್.ನಾಗರಾಜು, ಸುನೀಲ್, ಸಿ.ಬಿ.ನಾಗರಾಜು, ಪರಿಸರ ಅಭಿಯಂತರ ರಂಗಪ್ಪ, ಮಂಜಯ್ಯ ಮತ್ತಿತರರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News