ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಕರ್ತವ್ಯ: ತಾಪಂ ಸದಸ್ಯ ಮುಹಮ್ಮದ್ ರಫೀಕ್
ಕಳಸ, ಸೆ.22: ಮಕ್ಕಳು ಹಸಿ ಮಣ್ಣು ಇದ್ದಂತೆ ಅವರಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತಾಪಂ ಸದಸ್ಯ ಮುಹಮ್ಮದ್ ರಫೀಕ್ ಹೇಳಿದರು.
ಅವರು ಸ.ಹಿ.ಪ್ರಾ ಶಾಲೆ ಹಳುವಳ್ಳಿಯಲ್ಲಿ ನಡೆದ ಕಳಸ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಪ್ರತಿಭಾನ್ವಿತ ಮಕ್ಕಳು ಇದ್ದಾರೆ. ಆದರೆ ಪೋಷಕರ ಆರ್ಥಿಕ ಸ್ಥಿತಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಪ್ರತಿಭೆೆಯು ಎಲೆಮರೆ ಕಾಯಿಯಾಗಿಯೇ ಉಳಿದು ಹೋಗುತ್ತದೆ. ಇಂತಹ ಮಕ್ಕಳಿಗೆ ವೇದಿಕೆಯಾಗಲಿ ಅನ್ನುವ ದೃಷ್ಟಿಯಿಂದ ಪ್ರತಿಭಾ ಕಾರಂಜಿ ಎನ್ನುವ ವೇದಿಕೆಯನ್ನು ಸರಕಾರ ಮಾಡಿಕೊಟ್ಟಿದೆ. ಮಕ್ಕಳು ಭಾಗವಹಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದು ಹೇಳಿದರು.
ಕಳಸ ಗ್ರಾಪಂ ಅಧ್ಯಕ್ಷೆ ರತಿ ರವೀಂದ್ರ ಮಾತನಾಡಿ, ಪ್ರತಿ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ಜಿ.ಪ್ರಕಾಶ್ ಕುಮಾರ್ ಮಾತನಾಡಿ, ಮಕ್ಕಳು ಚಿಮ್ಮುವ ಕಾರಂಜಿಗಳು ಇದ್ದಂತೆ ಅವರಲ್ಲಿರುವ ಪ್ರತಿಭೆೆಯನ್ನು ಹೆಕ್ಕಿ ತೆಗೆಯುವುದೇ ಪ್ರತಿಭಾ ಕಾರಂಜಿಯ ಉದ್ದೇಶ. ಇಂತಹ ಕಾರ್ಯಕ್ರಮಗಳು ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶಿವನಂಜೇ ಗೌಡ, ಗ್ರಾಪಂ ಸದಸ್ಯ ರಾಮಮೂರ್ತಿ, ಶಿಕ್ಷಣ ಸಂಯೋಜಕ ರಿಯಾಝ್ ಅಹ್ಮದ್, ಕುಮಾರ್, ಕೆಂಚಪ್ಪ, ನಾಗೇಶ್ ರಾವ್, ಮುಖ್ಯ ಶಿಕ್ಷಕಿ ವಸಂತ ಪೈ, ಶಾಲಾಭಿವೃಧ್ಧಿ ಅಧ್ಯಕ್ಷರಾದ ರಘು ಜೆಸಾನ್, ಸಿಆರ್‌ಪಿಗಳಾದ ಸುರೇಂದ್ರ ನಾಯ್ಕಿ, ರಘುನಾಥ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.