ಮೂಡಿಗೆರೆ: ಸರಗಳ್ಳನ ಬಂಧನ
ಮೂಡಿಗೆರೆ, ಸೆ.22: ನಗರದ ವಿವಿಧೆಡೆ ನಡೆದಿರುವ ಮನೆಗಳ್ಳತನ, ಸರಗಳ್ಳತನ ಪ್ರಕರಣದ ತನಿಖೆ ನಡೆಸಿರುವ ಮೂಡಿಗೆರೆ ಪೊಲೀಸರು ಓರ್ವ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.16ರಂದು ಮೂಡಿಗೆರೆಯಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಸಂಜಯ್ ಅಲಿಯಾಸ್ ಹನುಮಂತ ಅಲಿಯಾಸ್ ವಿಜಯ(23) ಎಂಬಾತನನ್ನು ಹಿಡಿದು ವಿಚಾರಣೆ ಮಾಡಿರುವ ಪೊಲೀಸರು ಆತನಿಂದ 104 ಗ್ರಾಂ ಚಿನ್ನದ ಒಡವೆ ಹಾಗೂ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಕ್ ಹಾಗೂ ಒಡವೆಗಳ ಒಟ್ಟು ಬೆಲೆ 3,15,000 ರೂ.ಗಳಾಗಿವೆ ಎಂದು ಅಂದಾಜಿಸಲಾಗಿದೆ.
ಈತ ದಾವಣಗೆರೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಹೋಬಳಿಯ ಹೊಸಳ್ಳಿ ಗ್ರಾಮದವನೆಂದು ಗುರುತಿಸಲಾಗಿದೆ.
ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಪವಿಭಾಗದ ಉಪಾಧೀಕ್ಷಕ ಮಾರ್ಗದರ್ಶನದಂತೆ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ಎಂ.ಜಗದೀಶ್ ಹಾಗೂ ಮೂಡಿಗೆರೆ ಉಪನಿರೀಕ್ಷಕ ಗವಿರಾಜ್ ನೇತೃತ್ವದಲ್ಲಿ ಸಿಬ್ಬಂದಿ ರವೀಂದ್ರ, ಗಿರೀಶ್, ಜಾಪರ್ ಷರೀಪ್ ತಂಡ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.