×
Ad

ಕೇಂದ್ರ ಮಧ್ಯಸ್ಥಿಕೆ ವಹಿಸಿ ರಾಜ್ಯ ನೀರಿನ ಸಮಸ್ಯೆ ಬಗೆಹರಿಸಲಿ: ಕೆ.ಎನ್. ಜಗದೀಶ್

Update: 2016-09-22 22:01 IST

 ಕಾರವಾರ:, ಸೆ.22: ಕಾವೇರಿ ಹಾಗೂ ಮಹಾದಾಯಿ ನದಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಕೆ.ಎನ್. ಜಗದೀಶ್ ಹೇಳಿದರು.

ಇಲ್ಲಿನ ಸುಭಾಷ್ ಸರ್ಕಲ್ ಬಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನೀರಿನ ವಿಷಯವಾಗಿ ತಮಿಳುನಾಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಕ್ಕೆ ನ್ಯಾಯ ಲಭಿಸುವ ತನಕ ಹೋರಾಟ ನಡೆಯಲಿದೆ ಎಂದರು. ಮಹಾದಾಯಿ ತೀರ್ಪು ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರದ ವೈಫಲ್ಯವಿದೆ. ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ. ಸಮಸ್ಯೆಯ ವಿರುದ್ಧ ಒಗ್ಗಟ್ಟಾಗುವ ಬದಲು ರಾಜಕಾರಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲ ತೀರದಲ್ಲಿಕೋಸ್ಟ್‌ಗಾರ್ಡ್‌ಗೆ ಭೂಮಿ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಕೂಡಲೇಕೋಸ್ಟ್‌ಗಾರ್ಡ್‌ಗೆ ಭೂಮಿ ನೀಡುವ ವಿಷಯವನ್ನು ಕೈ ಬಿಡಬೇಕು ಎಂದು ಎಚ್ಚರಿಸಿದರು. ಸಭೆಯ ಬಳಿಕ ಸುಭಾಷ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿದ ಪದಾಧಿಕಾರಿಗಳು, ರಾಜ್ಯ ಸರಕಾರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಬಳಿಕ ಮೆರವಣಿಗೆ ಮೂಲಕ ಅಪರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಕಡಲತೀರದಲ್ಲಿ ಕೋಸ್ಟ್‌ಗಾರ್ಡ್‌ಗೆ ಜಮೀನು ನೀಡಬಾರದು. ಕಡಲತೀರ ಸೇರಿದಂತೆ ಪ್ರವಾಸೋದ್ಯಮ ತಾಣಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು. ಜಯ ಕರ್ನಾಟಕ ರಾಜ್ಯ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ದಿಲೀಪ್ ಕುಮಾರ್, ಜಿಲ್ಲಾಧ್ಯಕ್ಷ ದಿಲೀಪ್, ಕೆ.ಎನ್. ಜಗದೀಶ, ಡಾ. ಸುದೀಪಕುಮಾರ, ಸುಭಾಷ್ ಗುನಗಿ, ಸುದರ್ಶನ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News