×
Ad

ಸಿದ್ದಾಪುರ ಶೋಷಿತ ಗಿರಿಜನರಿಗೆ ಸರಕಾರದ ಸೌಲಭ್ಯ: ಜಿಲ್ಲಾಧಿಕಾರಿ ರಿಚರ್ಡ್ ಭರವಸೆ

Update: 2016-09-22 22:03 IST

ಸಿದ್ದಾಪುರ, ಸೆ.22: ಸಮೀಪದ ದಿಡ್ಡಳ್ಳಿ ಹಾಡಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸಂಟ್ ಡಿಸೋಜ ಭೇಟಿ ನೀಡಿ ಸುತ್ತಮುತ್ತಲಿನ ಹಾಡಿವಾಸಿಗಳಿಗೆ ತಕ್ಷಣ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ ವಾಸಮಾಡುತ್ತಿರುವ ನೂರಾರು ಗಿರಿಜನ ಕುಟುಂಬಗಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಸರಕಾರದ ಸೌಲಭ್ಯವನ್ನು ಪಡೆಯುವಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ತಲೆ ತಲಾಂತರದಿಂದ ಶೋಷಣೆಗೊಳಗಾಗಿರುವ ಜೇನುಕುರುಬ, ಬೆಟ್ಟಕುರುಬ, ಯರವ ಇತ್ಯಾದಿ ಆದಿವಾಸಿ ಜನಾಂಗಗಳನ್ನು ಗುರುತಿಸಿ ಮೊದಲಿಗೆ ಗುರುತಿನ ಚೀಟಿ, ನಂತರ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ದೊರಕಿಸಿ ಕೊಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮುಂದಾಗುವುದಾಗಿ ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸಂಟ್ ಡಿಸೋಜ ಹೇಳಿದರು

  ಜಿಲ್ಲಾಡಳಿತ, ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಕೊಡಗು ಜಿಪಂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿಡ್ಡಳ್ಳಿ ಗಿರಿಜನ ಹಾಡಿಯ ಬಸವನಹಳ್ಳಿ ಆಶ್ರಮ ಶಾಲೆಯ ಮುಂಭಾಗದಲ್ಲಿ ಕಾಡಿನ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ಶೋಷಿತ ಗಿರಿಜನರಿಗೆ ಸರಕಾರದ ಸವಲತ್ತು ದೊರಯಬೇಕಿದ್ದಲ್ಲಿ ಗುರುತಿನ ಪತ್ರ, ಆಧಾರ್ ಕಾರ್ಡ್ ಅನಿವಾರ್ಯ. ಬ್ಯಾಂಕ್ ಖಾತೆ ತೆರೆಯಲು ಹಾಗೂ ಪಡಿತರ ಚೀಟಿ ವಿತರಿಸಲೂ ಆಧಾರ್ ಕಾರ್ಡ್ ಅಗತ್ಯವಿದೆ. ಈ ನಿಟ್ಟಿನಲ್ಲಿ ತಿಂಗಳ ಅವಧಿಯಲ್ಲಿ ಮೊದಲಿಗೆ ಎರಡು ಗ್ರಾಮ ಪಂಚಾಯತ್‌ಗಳ ಆದಿವಾಸಿ ಜನಾಂಗವನ್ನು ಗುರುತಿಸಿ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಗ್ರಾಪಂನ ಪಿಡಿಒ ಆಸಕ್ತಿ ವಹಿಸಿ ಮಾಡಬೇಕಾಗಿದೆ ಎಂದರು.

ಗಿರಿಜನ ಮಹಿಳೆಯರಿಗೆ ಹೆರಿಗೆ ಭ್ಯೆ ಇತ್ಯಾದಿ ಸರಕಾರದ ಯೋಜನೆ ತಲುಪಿಸಲು, ನಿವೇಶನ ಒದಗಿಸಲು, ವಸತಿ ಯೋಜನೆ ಅನುಷ್ಠಾನಗೊಳಿಸಲು, ಯಶಸ್ವಿನಿ ವಿಮಾ ಯೋಜನೆಯನ್ನು ಗಿರಿಜನ ಫಲಾನುಭವಿಗಳಿಗೆ ಒದಗಿಸಲು ಐಟಿಡಿಪಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತುರ್ತು ಸ್ಪಂದನೆ ನೀಡಬೇಕಾಗಿದೆ ಎಂದು ಹೇಳಿದರು.

ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಗಿರಿಜನರನ್ನು ಅರಣ್ಯದ ಅಂಚಿಗೆ ತಂದು ಎಲ್ಲ ಮೂಲಭೂತ ಸೌಲಭ್ಯವನ್ನು ಒದಗಿಸುವಂತಾಗಬೇಕು. ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಬುಡಕಟ್ಟು ಜನಾಂಗ ವಸತಿ ಸವಲತ್ತು ವಂಚಿತವಾಗಲು ಕೆಲವೊಂದು ತಾಂತ್ರಿಕ ಸಮಸ್ಯೆ ಕಾರಣ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪ್ರತಿಯೊಬ್ಬರಿಗೂ ಸರಕಾರದ ಯೋಜನೆ ತಲುಪಲು, ನ್ಯೂನತೆ ಸರಿಪಡಿಸಲು ಹಾಡಿಗಳಲ್ಲಿ ಕಾನೂನು ಅರಿವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನುಡಿದರು.

ಕೊಡಗು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಮೋಹನ್ ಪ್ರಭು ಮಾತನಾಡಿ, ಮಹಿಳೆಯರು, ಮಕ್ಕಳ ರಕ್ಷಣೆ, ಪರಿಶಿಷ್ಟ ಜಾತಿ-ಪಂಗಡದ ಅಭ್ಯುದಯಕ್ಕೆ ಸಂವಿಧಾನಾತ್ಮಕ ಹಕ್ಕು ಬಾಧ್ಯತೆಗಳಿವೆ. 2006 ರಲ್ಲಿ ಕಾಡಿನಲ್ಲಿ ವಾಸಿಸುವ ಗಿರಿಜನರ ಪರವಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಯಿತು. ಕಾಡಿನಲ್ಲಿ ಸುಮಾರು ಮೂರು ತಲೆಮಾರು ವಾಸಮಾಡಿದ್ದು, 2005ಕ್ಕೂ ಮುನ್ನ ಕಾಡಿನಲ್ಲಿ ವಾಸವಿದ್ದವರಿಗೆ ಅರಣ್ಯ ಹಕ್ಕು ಅನ್ವಯಿಸುತ್ತದೆ. ಈ ಬಗ್ಗೆ ಗ್ರಾಮ ಸಮಿತಿಗಳ ಗಮನಕ್ಕೆ ತಂದು ಅನ್ಯಾಯವಾಗದಂತೆ ವಸತಿ ಇತ್ಯಾದಿ ಪೂರಕ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.

ಕೊಡಗು ಗ್ರಾಮೀಣ ಮಕ್ಕಳ ವೈದ್ಯಾಧಿಕಾರಿ ಡಾ. ದೇವಿ ಆನಂದ್ ಮಾತನಾಡಿ, ಮಹಿಳೆಯರು, ಮಕ್ಕಳಿಗೆ ಸಿಗುವ ವೈದ್ಯಕೀಯ ಸೇವೆ ಹಾಗೂ ಶಸ್ತ್ರಚಿಕಿತ್ಸೆಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಸಮಗ್ರ ಗಿರಿಜನ ಯೋಜನೆ(ಐಟಿಡಿಪಿ) ಪ್ರಭಾರ ಯೋಜನಾ ಸಮನ್ವಯಾ ಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಒಟ್ಟು 58 ಸಾವಿರ ಗಿರಿಜನರಿದ್ದು, 154 ಹಾಡಿಗಳು ಹಾಗೂ 14,200 ಕುಟುಂಬಗಳು ವಾಸವಿದ್ದು, ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಗಿರಿಜನ ಮುಖಂಡ ಜೆ.ಕೆ. ಅಪ್ಪಾಜಿ, ತಾಪಂ ಮಾಜಿ ಸದಸ್ಯ ಜೆ.ಕೆ. ರಾಮು ಮಾತನಾಡಿದರು.

ಸಭೆಯಲ್ಲಿ ಹಲವು ಗಿರಿಜನರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಇಂದಿರಾ, ಕಾವೇರಮ್ಮ, ಶಿವಮ್ಮ, ರಾಜು, ತಾಲೂಕು ಪರಿಶಿಷ್ಟ ಇಲಾಖೆಯ ಚಂದ್ರಶೇಖರ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News