ಶಿವಮೊಗ್ಗಜಿಲ್ಲೆಯಲ್ಲಿ ಡೆಂಗ್ ಮಹಾಮಾರಿಯ ಹಾವಳಿ!
ಬಿ. ರೇಣುಕೇಶ್
ಶಿವಮೊಗ್ಗ, ಸೆ. 22: ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ ಜ್ವರದ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ವಿಶೇಷವಾಗಿ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕು ವ್ಯಾಪ್ತಿಗಳಲ್ಲಿ ಡೆಂಗ್ ಮಹಾಮಾರಿಗೆ ತುತ್ತಾಗುತ್ತಿರುವವರ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಮತ್ತೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆ ಮಹಾಮಾರಿಯ ನಿಯಂತ್ರಣಕ್ಕೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಸುಮಾರು 9 ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 2,249 ಶಂಕಿತ ಡೆಂಗ್ ಪ್ರಕರಣಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲಾಗಿದೆ. ಇದರಲ್ಲಿ 226 ಪ್ರಕರಣಗಳಲ್ಲಿ ಡೆಂಗ್ ಜ್ವರ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿಯವರು ಖಚಿತಪಡಿಸಿದ್ದಾರೆ.
ಗುರುವಾರ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಡೆಂಗ್ ಜ್ವರಕ್ಕೆ ತುತ್ತಾದವರ ಪ್ರಮಾಣ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡೆಂಗ್ ಜ್ವರಕ್ಕೆ ತುತ್ತಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 70 ಜನರು ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಈ ಹಿಂದೆ ಡೆಂಗ್‌ಗೆ ತುತ್ತಾದವರೆಲ್ಲರೂ ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಪ್ರಸ್ತುತ ಜಿಲ್ಲೆಯ ವಿವಿಧೆಡೆ ಡೆಂಗ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಡೆಂಗ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಾ. ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ. ದೃಢಪಟ್ಟಿಲ್ಲ:
ಇತ್ತೀಚೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭದ್ರಾವತಿಯ 16 ವರ್ಷದ ಬಾಲಕ ಶಂಕಿತ ಡೆಂಗ್ ಜ್ವರದಿಂದ ಮೃತಪಟ್ಟಿರುವ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ.ಡೆಂಗ್ ಜ್ವರದಿಂದಲೇ ಬಾಲಕ ಮೃತಪಟ್ಟಿರುವುದು ಖಚಿತವಾಗಿಲ್ಲ. ಮೃತ ಬಾಲಕನ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ತಪಾಸಣೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಬಾಲಕನ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಬಾಲಕ ಜ್ವರದಿಂದ ಬಳಲುತ್ತಿದ್ದು, ಆತನ ರಕ್ತದ ಪರೀಕ್ಷೆಯಲ್ಲಿ ಪ್ಲೇಟ್ಲೆಟ್ ಪ್ರಮಾಣ ಕಡಿಮೆಯಿತ್ತು. ಡೆಂಗ್ ಜ್ವರಕ್ಕೆ ತುತ್ತಾಗಿದ್ದುದು ಪರೀಕ್ಷೆಯಲ್ಲಿ ಕಂಡು ಬಂದಿರಲಿಲ್ಲ ಎಂದು ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಾ. ರಾಜೇಶ್ ಸುರಗೀ ಹಳ್ಳಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಭದ್ರಾವತಿ ತಾಲೂಕಿನ ಮೈದೊಳಲು, ಅರೆಬಿಳಚಿ, ಮಾರಶೆಟ್ಟಿಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮೂರರಿಂದ ನಾಲ್ಕು ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಇಲಾಖೆ ಸ್ಥಳೀಯ ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ಉಳಿದಂತೆ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಡೆಂಗ್ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ: ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಶಂಕಿತ ಡೆಂಗ್ ಪೀಡಿತರ ರಕ್ತದ ಮಾದರಿಯನ್ನು ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಿಕೊಡುವಂತೆ ಖಾಸಗಿ ಆಸ್ಪತ್ರೆಯವರಿಗೆ ಸೂಚನೆ ನೀಡಲಾಗಿದೆ. 24 ಗಂಟೆಗಳ ಅವಧಿಯಲ್ಲಿ ರಕ್ತದ ಪರೀಕ್ಷೆ ನಡೆಸಿ ಸಂಬಂಧಿಸಿದ ಆಸ್ಪತ್ರೆಯವರಿಗೆ ವರದಿ ಕಳುಹಿಸಿಕೊಡಲಾಗುವುದು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಯವರು ರೋಗಿ ಹಾಗೂ ಅವರ ಕಡೆಯವರಿಗೆ ಡೆಂಗ್ ಜ್ವರದ ಬಗ್ಗೆ ಅಧಿಕೃತ ಹೇಳಿಕೆ ನೀಡಬಾರದು. ಈ ಮೂಲಕ ರೋಗಿ ಹಾಗೂ ಅವರ ಕಡೆಯವರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿಯವರು ತಿಳಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಎಲ್ಲ ರಕ್ತ ನಿಧಿ ಕೇಂದ್ರಗಳು ರಕ್ತಕ್ಕೆ ನಿಗದಿತ ಮೊತ್ತವನ್ನು ಮಾತ್ರ ನಾಗರಿಕರಿಂದ ಸಂಗ್ರಹಿಸಬೇಕು. ಒಂದು ವೇಳೆ ನಿಗದಿತ ಮೊತ್ತಕ್ಕಿಂತ ಹೆಚ್ಚು ದರ ವಸೂಲಿ ಮಾಡಿದರೆ ಅಂತಹ ರಕ್ತ ನಿಧಿ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು. ಈಗಾಗಲೇ ಈ ಬಗ್ಗೆ ಎಲ್ಲ ರಕ್ತ ನಿಧಿ ಕೇಂದ್ರಗಳಿಗೂ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಡೆಂಗ್ ಜ್ವರದ ಲಕ್ಷಣಗಳು ಕಂಡುಬಂದ ವೇಳೆ ರೋಗಿಗಳು ಗಾಬರಿಗೊಳಗಾಗಬಾರದು. ವಿಳಂಬಕ್ಕೆ ಆಸ್ಪದವಾಗದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ. ಇದರಿಂದ ವೈದ್ಯರಿಗೆ ಸಕಾಲದಲ್ಲಿ ರೋಗ ಗುಣ ಪಡಿಸಲು ಸಾಧ್ಯವಾಗಲಿದೆ. ಡೆಂಗ್ ಬಗ್ಗೆ ಜಿಲ್ಲೆಯಾದ್ಯಂತ ಇಲಾಖೆಯ ವತಿಯಿಂದ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಸ್ವಚ್ಚತಾ ಅಭಿಯಾನವನ್ನೂ ನಡೆಸಲಾಗುತ್ತಿದೆ.
ಡಾ. ರಾಜೇಶ್ ಸುರಗೀಹಳ್ಳಿ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ