ಭದ್ರಾದಿಂದ 10 ದಿನ ನೀರು ಹರಿಸಲಾಗದು: ಕಾಗೋಡು ಸ್ಪಷ್ಟನೆ
ಶಿವಮೊಗ್ಗ, ಸೆ. 22: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗುರುವಾರದಿಂದ 10ದಿನಗಳ ಕಾಲ ನೀರು ಹರಿಸದಿರಲು ಇಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಹೇಳಿದ್ದಾರೆ.
ಮಲವಗೊಪ್ಪದ ಭದ್ರಾಕಾಡಾ ಕಚೇರಿಯಲ್ಲಿ ಗುರುವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಭದ್ರಾ ಜಲಾಶಯದಲ್ಲಿ ಪ್ರಸ್ತುತ 40 ಟಿಎಂಸಿ ನೀರು ಶೇಖರಣೆ ಇದೆ. ಈ ಪೈಕಿ 13 ಟಿಎಂಸಿ ಶಾಶ್ವತ ಸಂಗ್ರಹಿತ ನೀರು, 7 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕಾಗಿ ಹಾಗೂ ಉಳಿದ 20 ಟಿಎಂಸಿ ನೀರು ನೀರಾವರಿ ಉದ್ದೇಶಕ್ಕಾಗಿ ಬಳಸಬೇಕಾಗಿದೆ. ಪ್ರಸ್ತುತ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ಕಾರಣ 10 ದಿನಗಳ ಕಾಲ ನೀರು ಹರಿಸದಿರಲು ತೀಮಾನಿಸಲಾಗಿದೆ ಎಂದರು.
ಮುಂದಿನ ಅಕ್ಟೋಬರ್ 2ರಿಂದ ಈಗಾಗಲೇ ನಿಗದಿಯಾಗಿರುವ 2,650 ಕ್ಯುಸೆಕ್ ನೀರು ಹರಿಸುವ ಬದಲಾಗಿ 2,300 ಕ್ಯುಸೆಕ್ ನೀರನ್ನು ನವೆಂಬರ್ 14ರ ವರೆಗೆ ಹರಿಸಲಾಗುವುದು ಎಂದು ಸಚಿವ ಕಾಗೋಡು ತಿಳಿಸಿದರು.
ಪ್ರಸ್ತುತ ಇರುವ ಬೆಳೆಯ ರಕ್ಷಣೆ ನಮ್ಮ ಪ್ರಮುಖ ಆದ್ಯತೆ. ಆದ್ದರಿಂದ ದಾವಣಗೆರೆ ಜಿಲ್ಲಾವ್ಯಾಪ್ತಿಯ ಒಣಪ್ರದೇಶದ ಬಳಕೆದಾರರಿಗೂ ನೀರು ಹರಿಸುವ ಉದ್ದೇಶವಿದೆ. ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗುವುದು. ಒಂದೊಮ್ಮೆ ಆ ಭಾಗಕ್ಕೆ ನೀರಿನ ಅವಶ್ಯವಿದ್ದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಶಿವಮೊಗ್ಗ ಮತ್ತು ದಾವಣಗೆರೆಯ ಭದ್ರಾ ಯೋಜನೆ ವ್ಯಾಪ್ತಿಯ ರೈತ ಮುಖಂಡರು ನೀರಿನ ಲಭ್ಯತೆ ಆಧಾರದ ಮೇಲೆ ಎಲ್ಲ ರೈತರ ಹಿತ ಕಾಯುವ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದ್ದರು.
ಸಭೆಯಲ್ಲಿ ಶಾಸಕರಾದ ಎಂ.ಜೆ.ಅಪ್ಪಾಜಿ, ಶಾರದಾ ಪೂರ್ಯನಾಯ್ಕಾ, ಶಾಂತನಗೌಡ, ಆರ್. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಭದ್ರಾಕಾಡಾ ಅಧ್ಯಕ್ಷ ಮಹದೇವಪ್ಪ, ರಮೇಶ್, ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ, ತೇಜಸ್ವಿ ಪಟೇಲ್, ಎಚ್. ಬಸವರಾಜಪ್ಪ ಸೇರಿದಂತೆ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.