×
Ad

ಸೊರಬ ಪಪಂ ಜೆಡಿಎಸ್ ತೆಕ್ಕೆಗೆ

Update: 2016-09-22 22:09 IST

ಸೊರಬ, ಸೆ.22: ಇಲ್ಲಿನ ಪಟ್ಟಣ ಪಂಚಾಯತ್‌ಗೆ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನ ಬೀಬಿಝುಲೇಖಾ ಪಯಾಝ್ ಅಹ್ಮದ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರತ್ನಮ್ಮ ನಾಗಪ್ಪಮಾಸ್ತರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಳಾಗಿ ಜೆಡಿಎಸ್‌ನ ಬೀಬಿ ಝುಲೇಖಾ ಹಾಗೂ ಪಕ್ಷೇತರ ಅಭ್ಯರ್ಥಿ ಶ್ರೀರಂಜನಿ ನಾಮಪತ್ರ ಸಲ್ಲಿಸಿದ್ದರು. ಅಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಏಕ ಮಾತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಪಪಂ ನ 11 ಕ್ಷೇತ್ರಗಳಲ್ಲಿ ಜೆಡಿಎಸ್, ಕೆಜೆಪಿ, ಕಾಂಗ್ರೆಸ್‌ಗಳ ತಲಾ ಮೂವರು ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಮೊದಲ ಅವಧಿಯ ತರುವಾಯ ಎರಡನೆ ಅವಧಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಬೀಬಿ ಝುಲೇಖಾ ಅವರಿಗೆ ಶಾಸಕ ಮಧುಬಂಗಾರಪ್ಪ ಸೇರಿದಂತೆ ಒಟ್ಟು 7 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಪಕ್ಷೇತರ ಅಭ್ಯರ್ಥಿ ಶ್ರೀರಂಜನಿ 2 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರು ಬೀಬಿ ಝುಲೇಖಾ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಿದರು. ಚುನಾವಣಾ ಕರ್ತವ್ಯದಲ್ಲಿ ಪಪಂ ಮುಖ್ಯಾಧಿಕಾರಿ ಟಿ. ಬಾಲಚಂದ್ರ ಹಾಗೂ ಸಿಬ್ಬಂದಿ ಸಹಕರಿಸಿದರು.

ನಾಟಕೀಯ ಬೆಳವಣಿಗೆ: ಚುನಾವಣಾ ಪ್ರಕ್ರಿಯೆ ಇರುವ ಕುರಿತು ಮಾಹಿತಿ ಇದ್ದರೂ ಪಪಂ ಸದಸ್ಯ ಮಹೇಶ್ ಗೌಳಿ ಗೈರಾಗುವ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದರೆ. ಕಾಂಗ್ರೆಸ್‌ನ ಎಂ.ಡಿ. ಉಮೇಶ್ ಹಾಗೂ ಸುಜಾಯತುಲ್ಲಾ ಸಭೆಯ ಅವಧಿಗಿಂತ ತಡವಾಗಿ ಬಂದರು. ಸಭೆಗೆ ತಡವಾಗಿ ಬಂದಿದ್ದರಿಂದ ಚುನಾವಣಾಧಿಕಾರಿ ಮತಚಲಾಯಿಸಲು ಅವಕಾಶ ಕಲ್ಪಿಸಲಿಲ್ಲ. ಕೊಂಚ ಸಮಯ ಚುನಾವಣಾಧಿಕಾರಿ ಹಾಗೂ ಸದಸ್ಯರ ನಡುವೆ ಮತದಾನಕ್ಕಾಗಿ ಚರ್ಚೆ ನಡೆಯಿತಾದರೂ ಚುನಾವಣಾ ನಿಯಾಮಾವಳಿಗಳಂತೆ ಚುನಾವಣಾಧಿಕಾರಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಯಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದ ಮಂಚಿ ಹನುಮಂತಪ್ಪ ಹಾಗೂ ಕೆಜೆಪಿಯಿಂದ ಆಯ್ಕೆಯಾಗಿದ್ದ ನೇತ್ರಾವತಿ ಕುಮಾರ್ ಹಾಗೂ ರತ್ನಮ್ಮನವರು ಜೆಡಿಎಸ್ ಅಧ್ಯಕ್ಷ ಅಭ್ಯರ್ಥಿಯ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ ಫಲವಾಗಿ ಬೀಬಿ ಝುಲೇಖಾ ಅಧ್ಯಕ್ಷ ಗಾದಿ ಅಲಂಕರಿಸಿದರು. ಒಟ್ಟಾರೆ ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ಶಾಸಕ ಮಧುಬಂಗಾರಪ್ಪನವರ ಚಾಣಾಕ್ಷತನ ಮತ್ತೊಮ್ಮೆ ಸಾಬೀತಾಗಿದೆ. ಮುಂದುವರಿದ ಮಧು ಚಾಣಾಕ್ಷತನ

ಪಟ್ಟಣದಲ್ಲಿ ಹಲವು ಕುತೂಹಲಗಳಿಗೆ ಕಾರಣವಾಗಿದ್ದ ಸೊರಬ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಮಧುಬಂಗಾರಪ್ಪ ಅವರ ರಾಜಕೀಯ ತಂತ್ರಗಳು ಫಲ ನೀಡಿದ್ದು, ಈ ಹಿಂದೆ ನಡೆದ ಗ್ರಾಪಂ, ಜಿಪಂ ಹಾಗೂ ಇತ್ತೀಚೆಗೆ ತಾಪಂ ಚುನಾವಣೆಯಲ್ಲಿಯೂ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಒಟ್ಟು ಜೆಡಿಎಸ್ 11 ಸದಸ್ಯರ ಪೈಕಿ ಕೇವಲ ಮೂರು ಸದಸ್ಯರನ್ನು ಹೊಂದಿದ್ದರೂ ಸಹ ಅಧ್ಯಕ್ಷಗಾದಿ ಅಲಂಕರಿಸುವಲ್ಲಿ ಮಧು ತಮ್ಮ ಕ್ಷೇತ್ರದಲ್ಲಿ ತಮ್ಮ ಪಾರಪತ್ಯವನ್ನು ಮೆರೆದಿದ್ದಾರೆ.

ಕಾರ್ಯಕರ್ತರ ಸಂಭ್ರಮ:

ಪಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಶಾಸಕ ಮಧುಬಂಗಾರಪ್ಪ, ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವರಿಗೆ ಶುಭಕೋರಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆ ಆಯ್ಕೆ:

ಬೀಬಿ ಝುಲೇಖಾ ಅವರಿಗೆ ಜೆಡಿಎಸ್ ಪಕ್ಷ ಅವಕಾಶ ಕಲ್ಪಿಸಿದ್ದು, ಅನಿರೀಕ್ಷಿತ ಬೆಳವಣಿಗೆಗಳ ಪರಿಣಾಮ ಸೊರಬ ಪಟ್ಟಣ ಪಂಚಾಯತ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೋರ್ವರು ಅಧ್ಯಕ್ಷ ಗದ್ದುಗೆ ಏರುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News