×
Ad

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ನ್ಯಾ. ಡಿ.ಕಂಬೇಗೌಡ

Update: 2016-09-22 22:12 IST

ಚಿಕ್ಕಮಗಳೂರು, ಸೆ. 22: ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿದರೆ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ ಎಂದು 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಮೂರ್ತಿ ಡಿ. ಕಂಬೇಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಅಂತಾರಾಷ್ಟ್ರೀಯ ಆತ್ಮಹತ್ಯಾ ತಡೆ ದಿನಾಚರಣೆ’ಯ ಅಂಗವಾಗಿ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮಹತ್ಯೆ ಮಹಾಪಾಪ, ಆತ್ಮಹತ್ಯೆಗೆ ಪ್ರೇರಣೆ ನೀಡುವುದು ಘೋರ ಅಪರಾಧ, ಆತ್ಮಹತ್ಯೆಗೆ ಪ್ರಯತ್ನ ಮಾಡಿ ಬದುಕುಳಿದರೆ ಅದೂ ಅಪರಾಧವಾಗುತ್ತದೆ. ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ, ಸರಕಾರಿ ಕೆಲಸ ದೊರೆಯದಿದ್ದಾಗ, ಕೆಲಸ ದೊರೆತು ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಮೇಲಾಧಿಕಾರಿಯ ಒತ್ತಡವಿದ್ದಾಗ, ರೈತರು ಬೆಳೆದ ಬೆಳೆಗೆ ಸರಿಯಾದ ಫಲ ದೊರೆಯದಿದ್ದಾಗ ಹತಾಶರಾಗಿ ಆತ್ಮಹತ್ಯೆಗೆ ಪ್ರಯತ್ನಿಸುವವರೇ ಹೆಚ್ಚು. ಇಂತಹ ಕಷ್ಟಗಳಿಗೆ ಹೆದರಿ ಆತ್ಮಹತ್ಯೆಗೆ ಪ್ರಯತ್ನಿಸುವ ಬದಲು ಧೃತಿಗೆಡದೆ ಸಮಸ್ಯೆಗಳ ಪರಿಹಾರಕ್ಕೆ ಚಿಂತಿಸಬೇಕು ಎಂದರು.

ನಮ್ಮ ಆಸೆ, ಆಕಾಂಕ್ಷೆ, ಗುರಿ ಸಾಧನೆಗಳಿಗೋಸ್ಕರವಾದರೂ ಮನುಷ್ಯನಾಗಿ ಬದುಕಿ ಆ ಮೂಲಕವಾದರೂ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಈ ಹತಾಶೆ ಭಾವನೆಯನ್ನು ಅಳಿಸಿ ಕಷ್ಟವನ್ನು ಎದುರಿಸುವ ಶಕ್ತಿ ಹಾಗೂ ವಿಶಿಷ್ಟ ಗುಣ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುತ್ತದೆ. ವ್ಯಕ್ತಿ ತನ್ನಲ್ಲಿರುವ ಶಕ್ತಿ ಹಾಗೂ ವಿಶಿಷ್ಟ ಗುಣವನ್ನು ಅರಿತು ಆ ದಾರಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಆ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ವಿ.ಎಚ್ ದಯಾನಂದ್ ಮಾತನಾಡಿ, ಕ್ಷಣಿಕದ ತಪ್ಪುನಿರ್ಧಾರಗಳಿಂದ ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆ. ಇಂತಹ ವ್ಯಕ್ತಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿ ಸಮಾಜದಲ್ಲಿ ಆತ್ಮಹತ್ಯೆಯಂತಹ ಘೋರ ಕೃತ್ಯಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು.

     ಉಪವಿಭಾಗಾಧಿಕಾರಿ ಸಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ, ಡಾ. ಎಚ್.ಎಸ್. ಅಶ್ವತ್ ಬಾಬು, ಬಿ.ಜಿ.ಎಸ್. ಜೆ.ಜಿ. ಸುರೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News