ಹಸಿವು ತಾಳಲಾರದೆ ಹಾವನ್ನು ತಿಂದ ಹುಲಿ!

Update: 2016-09-22 17:46 GMT

ಪಿರಿಯಾಪಟ್ಟಣ, ಸೆ.22: ಕೊಳಕು ಮಂಡಲ ಹಾವನ್ನು ತಿಂದು 9 ವರ್ಷದ ಹೆಣ್ಣು ಹುಲಿಯೊಂದು ನಂಜು ಏರಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಆನೆಚೌಕೂರು ಹತ್ತಿರ ಮುತ್ತುರಾಯಸ್ವಾಮಿ ದೇವಸ್ಥಾನದ ಬಳಿ ಹುಲಿ ಕಳೇಬರ ಕಳೆದ ಮಂಗಳವಾರ ಪತ್ತೆಯಾಗಿತ್ತು. ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಮಂಡಲದ ಹಾವನ್ನು ತಿಂದಿರುವುದರಿಂದ ವಿಷ ಹುಲಿಯ ದೇಹಕ್ಕೆ ವ್ಯಾಪಿಸಿ ಸಾವನ್ನಪ್ಪಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಹುಲಿಯ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಅದು ತಿಂದ ಹಾವು ಜೀರ್ಣವಾಗದಿರುವುದು ಕಂಡುಬಂದಿದ್ದು, ಹಾವಿನ ಬಾಲ ಹುಲಿ ಹೊಟ್ಟೆಯೊಳಗೆ ಸಿಕ್ಕಿದೆ. ಜೊತೆಗೆ ಚಿಪ್ಪುಹಂದಿಯ ಚಿಪ್ಪುಗಳು ಸಹ ಪತ್ತೆಯಾಗಿದ್ದು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಹುಲಿಯ ಕೆಲ ಭಾಗಗಳನ್ನು ಕಳುಹಿಸಲಾಗಿದೆ ಎಂದು ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ಪಶುವೈದ್ಯ ಡಾ.ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದ್ದು ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಮಂಡಲದ ಹಾವನ್ನು ತಿಂದಿರುವುದರಿಂದ ನಂಜು ಏರಿ ಸಾವನ್ನಪ್ಪಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರಥಮ ಪ್ರಕರಣ ಹುಲಿಗಳು ಹಾವುಗಳನ್ನು ತಿನ್ನುವುದಿಲ್ಲ. ಆದರೆ, ಹಸಿವು ತಾಳಲಾರದೆ ಹೆಣ್ಣು ಹುಲಿ ಕೊಳಕುಮಂಡಲ ಹಾವು ತಿಂದಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಲಿ ಹಾವನ್ನು ತಿಂದು ಸಾವನ್ನಪ್ಪಿರುವ ಪ್ರಕರಣ ರಾಜ್ಯದಲ್ಲಿ ಪ್ರಥಮವಾಗಿ ವರದಿಯಾಗಿದ್ದು ಈ ಹಿಂದೆ ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶದಲ್ಲಿ ನಾಗರಹಾವನ್ನು ತಿಂದು ಹುಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News