ಸಹ್ಯಾದ್ರಿ ಕಲಾ, ವಿಜ್ಞಾನ ಕಾಲೇಜ್‌ಗೆ ‘ಎ’ ಗ್ರೇಡ್
ಶಿವಮೊಗ್ಗ, ಸೆ.23: ನಗರದ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಅಮೃತ ಮಹೋತ್ಸವದ ವರ್ಷದಲ್ಲಿ ನ್ಯಾಕ್ ವೌಲ್ಯ ಮಾಪನದಲ್ಲಿ ‘ಎ’ ಗ್ರೇಡ್ ದೊರೆತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ 25 ರಿಂದ 27ರವರೆಗೆ ನ್ಯಾಕ್ ಸಮಿತಿ ಸಹ್ಯಾದ್ರಿ ಕಾಲೇಜಿಗೆ ಭೇಟಿ ನೀಡಿತ್ತು. ಈ ಸಂದಭರ್ದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಮಾಹಿತಿಗಳನ್ನು ಪಡೆದು ಶೈಕ್ಷಣಿಕ ಗುಣಮಟ್ಟದ ವೌಲ್ಯಾಂಕವನ್ನು ನಿರ್ಧರಿಸಿದೆ. 2008-09ರ ಸಾಲಿನಲ್ಲಿ ಮೊದಲ ಬಾರಿಗೆ ಕಾಲೇಜಿಗೆ ‘ಎ’ ಗ್ರೇಡ್ ದೊರೆತಿತ್ತು ಎಂದು ವಿವರಿಸಿದರು.
ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸತತ 2 ಬಾರಿ ‘ಎ’ ಗ್ರೇಡ್ ಪಡೆದ ಏಕೈಕ ಕಾಲೇಜು ಇದಾಗಿದೆ. ಈ ಕಾಲೇಜಿನಲ್ಲಿ 21 ಪ್ರಾಧ್ಯಾಪಕರು ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ಕಾಲೇಜು ನೀಡುತ್ತಿದೆ. ಹಲವು ವಿಶೇಷ ಐಚ್ಛಿಕ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತಿದೆ ಎಂದ ಅವರು, ದೇಶದ 146 ಕಾಲೇಜುಗಳಲ್ಲಿ ಈ ಕಾಲೇಜಿಗೆ ‘ಕಾಲೇಜ್ ವಿದ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್’ ಎಂಬ ಮಾನ್ಯತೆಯನ್ನು ಯುಜಿಸಿ ನೀಡಿದೆ ಎಂದರು.
ಈ ಹಿನ್ನೆಲೆಯಲ್ಲಿ ಕಾಲೇಜಿನ ಬೆಳವಣಿಗೆಗಾಗಿ ಯುಜಿಸಿಯು 1 ಕೋಟಿ ರೂ. ಅನುದಾನವನ್ನು ನೀಡಿದೆ. ಅದರಂತೆ ಮಹಾನಗರ ಪಾಲಿಕೆ, ಜಿಪಂ, ಎಂಎಲ್‌ಎ, ಎಂಎಲ್ಸಿ, ವಿವಿಧ ಪ್ರಾಧಿಕಾರಗಳು ಮತ್ತು ಜಿಲ್ಲಾಡಳಿತ ಮೂಲಸೌಕರ್ಯಕ್ಕಾಗಿ ವಿವಿಧ ರೀತಿಯಲ್ಲಿ ಸಹಾಯ ನೀಡಿವೆ ಎಂದು ಹೇಳಿದರು.
ಪ್ರಾಚಾರ್ಯ ಗೌಡರ ಶಿವಣ್ಣ ಮಾತನಾಡಿ, ಕಾಲೇಜಿನಲ್ಲಿ ಈ ವರ್ಷದಿಂದ ‘ಸಹ್ಯಾದ್ರಿ ಡೇ ಕೇರ್ ಕ್ಲಿನಿಕ್’ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನದಡಿ 15 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಲ್ಟಿ ಜಿಮ್ ಸ್ಥಾಪಿಸಲಾಗಿದೆ. ಎಂಎಲ್ಸಿ ಭಾನುಪ್ರಕಾಶ್ 3 ಲಕ್ಷ ರೂ. ಅನುದಾನ ನೀಡಿದ್ದು, ಇದರಿಂದ ಮಳೆಕೊಯ್ಲು ನಿರ್ಮಿಸಲಾಗಿದೆ. ಇನ್ನೋರ್ವ ಎಂಎಲ್ಸಿ ಗಣೇಶ್ ಕಾರ್ಣಿಕ್ ನೀಡಿದ 3 ಲಕ್ಷ ರೂ. ಅನುದಾನದಲ್ಲಿ ವಾಹನ ಪಾರ್ಕಿಂಗ್ ನಿರ್ಮಿಸಲಾಗಿದೆ. ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಮರುಗನಳ್ಳಿ ತಮ್ಮ ತಂದೆಯ ಹೆಸರಿನಲ್ಲಿ 2.75 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನವನ್ನು ನಿರ್ಮಿಸಿದ್ದಾರೆ ಎಂದು ವಿವರಿಸಿದರು.