ಸರಕಾರಿ ನೌಕರರು ಜನಸೇವಕರಂತೆ ಕರ್ತವ್ಯ ನಿರ್ವಹಿಸಲಿ: ಕೆ.ಎಚ್.ನಾಗರಾಜ್
ಚಿಕ್ಕಮಗಳೂರು, ಸೆ.23: ಸರಕಾರಿ ನೌಕರಿಯಲ್ಲಿ ಕರ್ತವ್ಯ ನಿರ್ವಹಿಸುವವರು ಅಹಂಭಾವ ಬಿಟ್ಟು ಜನ ಸೇವಕರೆಂಬ ಮನೋಭಾವನೆಯಿಂದ ಕೆಲಸ ಮಾಡಿದಾಗ ಭವಿಷ್ಯ ಉಜ್ವಲವಾಗುತ್ತದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್.ನಾಗರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ನಗರದ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿ ನೌಕರಿ ಸಿಗಲು ಪುಣ್ಯ ಮಾಡಿರಬೇಕು. ಅಂತಹ ಭಾಗ್ಯ ನಮ್ಮದಾಗಿದೆ. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಮ್ಮ ಕೆಲಸದಲ್ಲಿ ನಿಷ್ಠೆ ಪ್ರಾಮಾಣಿಕತೆ ಮೆರೆದರೆ ಪರಿಸರ ಸಂಪತ್ತನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರುಗಳಿಸಲು ಸಾಧ್ಯ ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇದು ಪರಿಸರಕ್ಕೆ ಸಮೃದ್ದವಾಗಿದೆ. ಇಂತಹ ಸುಂದರ ಪರಿಸರದಲ್ಲಿ ಕೆಲಸ ಮಾಡಿದ್ದು ಸುಕೃತ, ನನ್ನ ಯಶಸ್ಸಿನ ಹಿಂದೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯರಾದ ನಿಮ್ಮೆಲ್ಲರ ಶ್ರಮ ಅಡಗಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಮಾಣಿಕ್ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವದಿಂದ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡು ಅರಣ್ಯ ಸಂಪತ್ತನ್ನು ಉಳಿಸಲು ಪ್ರೋತ್ಸಾಹದಾಯಕವಾದ ಸಲಹೆ ಸಹಕಾರ ನೀಡುತ್ತಾ ಬಂದ ಅಧಿಕಾರಿ ನಾಗರಾಜ್ ಆಗಿದ್ದಾರೆ. ಇಲಾಖೆಯಲ್ಲಿ ಆಗಿಂದಾಗೆ ಜಟಿಲ ಸಮಸ್ಯೆಗಳು ಉದ್ಭ್ಬವವಾಗುವುದು ಸಾಮಾನ್ಯ ಅದಕ್ಕೆಲ್ಲ ಮೃದು ಸ್ವಭಾವದಿಂದಲೆ ಸಮಸ್ಯೆಗೆ ಪರಿಹಾರದ ಸಲಹೆ ನೀಡುತ್ತಿದ್ದರು. ಯಾವ ಅಧಿಕಾರಿಯೂ ಸಿಬ್ಬಂದಿಗೆ ಕಿರುಕುಳ ನೀಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಇಲಾಖೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಸಿಸಿಎಫ್ ಸಾಕ್ಷಿ ಎಂದು ಹೇಳಿದರು.
ಭದ್ರಾ ಹುಲಿ ಸಂರಕ್ಷಿತ ನಿರ್ದೇಶಕ ಪಿ.ಬಿ.ಕರುಣಾಕರ್, ಡಿಸಿಎಫ್‌ಗಳಾದ ಪ್ರಸನ್ನಕುಮಾರ್, ಬಸವರಾಜ್, ಆರ್‌ಎಫ್‌ಒಗಳಾದ ಅಬ್ದುಲ್ ಅಝೀಝ್, ಮೋಹನ್, ರಂಗಸ್ವಾಮಿ, ಚಂಗಪ್ಪಮತ್ತಿತರರು ಉಪಸ್ಥಿತರಿದ್ದರು. ಡಾ.ವೈ.ಕೆ.ದಿನೇಶ್ ನಿರೂಪಿಸಿ, ಜಿ.ಯು.ಶಂಕರ್ ವಂದಿಸಿದರು. ್ಖ