×
Ad

‘ಸುಪ್ರೀಂ’ ಆದೇಶ ಪಾಲಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ: ಮುಖ್ಯಮಂತ್ರಿ

Update: 2016-09-23 22:01 IST

ಬೆಂಗಳೂರು, ಸೆ.23: ತಮಿಳುನಾಡಿಗೆ ನೀರುಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ನೀಡಿರುವ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯ ವಿಶೇಷ ತುರ್ತು ಅಧಿವೇಶನದಲ್ಲಿ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರೈತರ ಹಿತ ಕಾಪಾಡುವುದು ನಮ್ಮ ಜಬಾಬ್ದಾರಿ. ಸರಕಾರ ಹಾಗೂ ಸಚಿವ ಸಂಪುಟ ನಿರ್ಣಯ ಕೈಗೊಳ್ಳುವ ಬದಲು, ಸದನದ ಎದುರು ಬಂದಿದ್ದೇವೆ. ಈ ಸದನ ಕೈಗೊಳ್ಳುವಂತಹ ನಿರ್ಣಯಕ್ಕೆ ಸರಕಾರ ಬದ್ಧವಾಗಿರುತ್ತದೆ ಎಂದರು.
ಜನರಿಗೆ ಕುಡಿಯುವ ನೀರು ಪೂರೈಸುವುದರ ಜೊತೆಗೆ ರೈತರ ಹಿತ ಕಾಪಾಡುವ ಪ್ರಯತ್ನವನ್ನು ಮಾಡುತ್ತೇವೆ. ಬೆಳೆ ನಷ್ಟ ಅನುಭವಿಸಿರುವಂತಹ ರೈತರಿಗೆ ಪರಿಹಾರ ಒದಗಿಸುವ ಸಂಬಂಧ ಪರಿಶೀಲನೆ ನಡೆಸಿ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ರಾಜ್ಯವು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಸತತ ಎರಡನೆ ಬಾರಿ ಜಲಸಂಕಷ್ಟದ ವರ್ಷವನ್ನು ನಾವು ಎದುರಿಸುತ್ತಿದ್ದೇವೆ. ತೀವ್ರ ಬರಗಾಲ, ಮಳೆಯ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದು, ರೈತರ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
176 ತಾಲೂಕುಗಳ ಪೈಕಿ 136 ತಾಲೂಕುಗಳು ಬರಪೀಡಿತವಾಗಿವೆ. ಕಳೆದ ಬಾರಿಗಿಂತ ಈ ವರ್ಷ ಮಳೆಯ ಕೊರತೆ ಹೆಚ್ಚಿದೆ. ಇದರಿಂದ, ಸಂಕಷ್ಟದ ಸನ್ನಿವೇಶ ಎದುರಾಗಿದೆ. ಸುಪ್ರೀಂಕೋರ್ಟ್ ಸೆ.20ರಂದು ಆದೇಶ ನೀಡಿದ ನಂತರ, ಅನಿವಾರ್ಯವಾಗಿ, ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಸದನವನ್ನು ಕರೆಯ ಬೇಕಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿಯ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರವಾದ ಮಳೆ ಕೊರತೆಯಿದೆ. ಕಳೆದ 41 ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ ನಮಗೆ ಸರಾಸರಿ 250 ಟಿಎಂಸಿ ನೀರು ಬರಬೇಕಿತ್ತು. ಆದರೆ, ಈ ವರ್ಷ ಬಂದಿರುವುದು ಕೇವಲ 124 ಟಿಎಂಸಿ ಮಾತ್ರ. ಶೇ.48ರಷ್ಟು ನೀರಿನ ಕೊರತೆಯುಂಟಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
2.90 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಯಾಗಿರುವ ಬೆಳೆಗಳಿಗೆ ನೀರಿಲ್ಲದ ಪರಿಸ್ಥಿತಿ. ನಾಲ್ಕು ಜಲಾಶಯಗಳಲ್ಲಿ 27.06 ಟಿಎಂಸಿ ಮಾತ್ರ ನೀರಿದೆ. ಮುಂದಿನ ಸಾಲಿನ ಮೇ ಅಂತ್ಯದವರೆಗೆ ಬೆಂಗಳೂರು ಮಹಾನಗರ ಹಾಗೂ ಕಾವೇರಿ ಕೊಳ್ಳದ ಪ್ರದೇಶಗಳ ಜನರಿಗೆ ಕುಡಿಯುವ ನೀರು ಪೂರೈಸಲು 24.11 ಟಿಎಂಸಿ ನೀರು ಬೇಕು ಎಂದು ಅವರು ಹೇಳಿದರು.
ಮೆಟ್ಟೂರು ಜಲಾಶಯದಲ್ಲಿ ಇವತ್ತು 52 ಟಿಎಂಸಿ ನೀರು ಲಭ್ಯವಿದೆ. ನಾವು ಜನರಿಗೆ ಕುಡಿಯಲು ನೀರು ನೀಡಬೇಕು. ಆದರೆ, ಅವರು ಸಾಂಬಾ ಬೆಳೆಗಾಗಿ ನೀರು ಕೇಳುತ್ತಿದ್ದಾರೆ. ಕೇಂದ್ರ ಸರಕಾರದ ಜಲನೀತಿಯಲ್ಲೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದ್ದು, ನಂತರ ಕೃಷಿ ಹಾಗೂ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಆದರೆ, ನಮ್ಮ ರೈತರು ಹಾಗೂ ಜನರನ್ನು ಉಳಿಸಬೇಕಿದೆ. ಈಗಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲೆ ನಮಗೆ ಅಪಾರವಾದ ನಂಬಿಕಿಯಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನ್ಯಾಯಾಂಗದ ಮೇಲೆ ಅಪಾರ ಗೌರವ: ನ್ಯಾಯಾಂಗದ ಮೇಲೆ ಅಪಾರವಾದ ಗೌರವವಿದೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಉದ್ದೇಶ ನಮ್ಮದಲ್ಲ. ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಎಸ್‌ಎಲ್‌ಪಿ ಅ.18ರಂದು ವಿಚಾರಣೆಗೆ ಬರಲಿದೆ. ರಾಜ್ಯದ ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಎಲ್ಲ ಪಕ್ಷಗಳು ಜನರ ಹಿತಕ್ಕೆ ಬದ್ಧವಾಗಿವೆ ಎಂದು ಅವರು ತಿಳಿಸಿದರು.
ತನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ಸುಪ್ರೀಂಕೋರ್ಟ್ ಎರಡು ಬಾರಿ ನೀಡಿದ ಆದೇಶವನ್ನು ನಾವು ಪಾಲಿಸಿದ್ದೇವೆ. ಸೆ.5ರಂದು ನಮ್ಮ ಜಲಾಶಯಗಳಲ್ಲಿ 45 ಟಿಎಂಸಿ ನೀರು ಇತ್ತು. ಕುಡಿಯಲು 27 ಟಿಎಂಸಿ, ಬೆಳೆಗಳಿಗೆ 47 ಟಿಎಂಸಿ ಹಾಗೂ ಕೆರೆಗಳನ್ನು ತುಂಬಿಸಲು 11 ಟಿಎಂಸಿ ಅಗತ್ಯವಿತ್ತು ಎಂದು ಅವರು ಹೇಳಿದರು.
ಸೆ.5 ಹಾಗೂ ಸೆ.12ರಂದು ಸುಪ್ರೀಂಕೋರ್ಟ್ ಆದೇಶ ನೀಡಿದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮಿಳುನಾಡಿಗೆ ನೀರು ಬಿಡಬೇಕು ಎಂದರು. ಆದರೆ, ಸೆ.20ರಂದು ಮತ್ತೆ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶಿಸಿದಾಗ, ಯಾವುದೆ ಕಾರಣಕ್ಕೂ ನೀರು ಬಿಡಬೇಡಿ ಎಂದು ಸರಕಾರಕ್ಕೆ ತಿಳಿಸಿದರೆಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್‌ಗಳಿಂದಲೂ ಅಭಿಪ್ರಾಯಗಳನ್ನು ಕ್ರೋಢಿಕರಿಸಿದ ನಂತರ ಈ ಸದನದ ಎದುರು ನಾವು ಬಂದಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.


 ರಾಜ್ಯ ಸರಕಾರದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಬೆಂಬಲವಾಗಿ ನಿಂತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಿರಿಯ ಕಾಂಗ್ರೆಸ್ ನಾಯಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಉಭಯ ಸದನಗಳ ಎಲ್ಲ ಸದಸ್ಯರು, ಮಾಧ್ಯಮದವರು ಹಾಗೂ ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News