×
Ad

ಕಾಡಾನೆ ಹಾವಳಿ ತಡೆಗೆ ಗ್ರಾಮಸ್ಥರ ಒತ್ತಾಯ

Update: 2016-09-23 22:02 IST

 ಸಿದ್ದಾಪುರ, ಸೆ.23: ಸಿದ್ದಾಪುರ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯು ಅಧ್ಯಕ್ಷ ಎಂ.ಕೆ. ಮಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ಎಂ.ಕೆ. ಮಣಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಹೆಚ್ಚು ಗಮನವಹಿಸುತ್ತಿದ್ದೇವೆ. ಬೀದಿದೀಪ, ಕುಡಿಯುವ ನೀರು, ಮುಖ್ಯ ರಸ್ತೆಯಲ್ಲಿ ಇಂಟರ್ ಲಾಕ್, ಮನೆ ನಿರ್ಮಾಣ ಸೇರಿದಂತೆ ಬಯಲು ಮುಕ್ತ ಗ್ರಾಮವನ್ನಾಗಿಸಲು ಶೌಚಾಲಯ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಪ್ಲಾಸ್ಟಿಕ್ ಮುಕ್ತ ಪರಿಸರ ಕಾರ್ಯ ಮುಂದಾಗುವುದಾಗಿ ಹೇಳಿದ ಅವರು, ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿದರು. 

ಕಾರ್ಮಿಕ ಮುಖಂಡ ರಮೇಶ್ ಮಾತನಾಡಿ, ಕಂದಾಯ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗೆ ಗೈರಾಗುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದರು. ಶಿಕ್ಷಣ ಇಲಾಖೆಯಿಂದ ಬಡ ವಿದ್ಯಾರ್ಥಿಗಳಿಗೆ ಸಿಗಬೇಕಾದ ಆರ್‌ಟಿಇ ಉಚಿತ ಶಿಕ್ಷಣ ಶ್ರೀಮಂತರ ಪಾಲಾಗುತ್ತಿದ್ದು, ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ, ಪರಿಶೀಲನೆ ನಡೆಸಿ ಬಡ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಅಧಿಕಾರಿ ಲಿಖಿತವಾಗಿ ದೂರು ನೀಡುವಂತೆ ತಿಳಿಸಿದರು.

ಬಿಜೆಪಿ ಮುಖಂಡ ಮನೋಹರ ಮಾತನಾಡಿ, ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

  ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಮಾತನಾಡಿ, ಈ ಭಾಗದಲ್ಲಿರುವ 4ಪುಂಡಾನೆಗಳನ್ನು ಹಿಡಿಯಲು ಮುಂದಾಗಿದು,್ದ ದಸರಾಕ್ಕೆ ತೆರಳಿರುವ ಸಾಕಾನೆ ಬಂದ ನಂತರ ಕಾರ್ಯಾಚರಣೆ ಮಾಡುವುದಾಗಿ ಹೇಳಿದ ಅವರು, ಕಾಡಾನೆ ಹಾವಳಿ ಭಾಗದಲ್ಲಿರುವ ವಿದ್ಯಾರ್ಥಿಗಳು ಶಾಲೆಗೆ ತೆರಳಲು ವಾಹನ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಎಸ್‌ಡಿಪಿಐ ಮುಖಂಡ ಮುಸ್ತಫಾ ಮಾತನಾಡಿ, ಕಳೆದ 40 ವರ್ಷಗಳಿಂದ ಕಸ ವಿಲೇವಾರಿಗೆ ಸೂಕ್ತ ಜಾಗ ಕಂಡುಕೊಳ್ಳಲಾಗದೆ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಆಡಳಿತ ಮಂಡಳಿ ಶಾಶ್ವತ ಜಾಗ ಕಂಡುಕೊಳ್ಳಲು ಮುಂದಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ವರದಿ ಮಂಡಿಸಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಡಾ. ತಮ್ಮಯ್ಯ ಉಪಸ್ಥಿತರಿದ್ದರು.

 ಸರಕಾರಗಳ ಯೋಜನೆಗಳನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಸದುಪಯೋಗ ಪಡಿಸಿ ಕೊಳ್ಳಬೇಕು. ಗುಹ್ಯ, ಕರಡಿಗೊಡು, ಸಿದ್ದಾಪುರ ಗ್ರಾಮಗಳಿಗೆ ಸೇತುವೆ, ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದ್ದು, ರಸ್ತೆ ದುರಸ್ತಿ ಕಾರ್ಯ ಸದ್ಯದಲ್ಲೇ ನಡೆಯಲಿದೆ. ಕಸ ವಿಲೇವಾರಿ, ನಿವೇಶನ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ರಹಿತವಾಗಿ ಸಚಿವರ ಬಳಿ ನಿಯೋಗ ತೆರಳುವುದಾಗಿ ಜಿಪಂ ಸದಸ್ಯೆ ಸರಿತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News