ವಿವಿಧೆಡೆ ದಾಳಿ: 71 ಬಾಲ ಕಾರ್ಮಿಕರ ರಕ್ಷಣೆ!
ಶಿವಮೊಗ್ಗ, ಸೆ. 23: ಬಾಲ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರಕಾರ ಆರಂಭಿಸಿರುವ ‘ಆಪರೇಷನ್ ಮುಸ್ಕಾನ್-2’ ಕಾರ್ಯಾಚರಣೆ ಜಿಲ್ಲಾದ್ಯಂತ ಮುಂದುವರಿದಿದ್ದು, ಭದ್ರಾವತಿ ಹಾಗೂ ಶಿಕಾರಿಪುರ ಪಟ್ಟಣಗಳಲ್ಲಿ ಕೆಲಸದಲ್ಲಿ ನಿರತರಾಗಿದ್ದ 71 ಬಾಲ ಕಾರ್ಮಿಕರನ್ನು ವಶಕ್ಕೆ ಪಡೆದು ರಕ್ಷಿಸಿದೆ.
ಅಧಿಕಾರಿಗಳ ವಿಶೇಷ ತಂಡವು ಸೆ. 21 ಮತ್ತು 22 ರಂದು ಭದ್ರಾವತಿ ಹಾಗೂ ಶಿಕಾರಿಪುರದ ವಿವಿಧೆಡೆ ದಿಢೀರ್ ದಾಳಿ ನಡೆಸಿ, ಕೆಲಸದಲ್ಲಿ ತೊಡಗಿದ್ದ 16 ವರ್ಷಕ್ಕಿಂತ ಕಡಿಮೆ ವಯೋಮಾನದ ಬಾಲ ಕಾರ್ಮಿಕರ ರಕ್ಷಣೆ ಮಾಡಿದೆ. ಬಳಿಕ ಎಲ್ಲಾ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಭದ್ರಾವತಿಯಲ್ಲಿ 29 ಹಾಗೂ ಶಿಕಾರಿಪುರದಲ್ಲಿ 42 ಬಾಲ ಕಾರ್ಮಿಕರ ಸಂರಕ್ಷಣೆ ಮಾಡಲಾಗಿದೆ. ಒಟ್ಟಾರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ 101 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಇನ್ನಷ್ಟು ದಿನಗಳ ಕಾಲ ಜಿಲ್ಲೆಯಾದ್ಯಂತ ಈ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ. ಕಾರ್ಯಾಚರಣೆ:
ಬಾಲ ಕಾರ್ಮಿಕರ ರಕ್ಷಣೆಗಾಗಿ ರಾಜ್ಯ ಸರಕಾರ ‘ಆಪರೇಷನ್ ಮುಸ್ಕಾನ್ - 2’ ಎಂಬ ಕಾರ್ಯಾಚರಣೆ ಆರಂಭಿಸಿದ್ದು, ಇದರನ್ವಯ ಜಿಲ್ಲಾ ಪೊಲೀಸ್ ಇಲಾಖೆ ನಗರದ ವಿವಿಧೆಡೆ ಕೆಲಸ ಮಾಡುತ್ತಿರುವ 16 ವರ್ಷವಯೋಮಾನದೊಳಗಿನ ಕಾರ್ಮಿಕರ ಪತ್ತೆಗೆ ಮುಂದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ತಂಡವೊಂದನ್ನು ರಚಿಸಲಾಗಿದೆ. ತಂಡದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಬಾಲ ನ್ಯಾಯ ಮಂಡಳಿ, ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಘಟಕದವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ತಂಡವು ವಿವಿಧೆಡೆ ದಿಢೀರ್ ದಾಳಿ ನಡೆಸಿ ಬಾಲ ಕಾರ್ಮಿಕರ ಪತ್ತೆ ಕಾರ್ಯ ನಡೆಸುತ್ತಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡರೆ ವಿಧಿಸಬಹುದಾದ ದಂಡ - ಶಿಕ್ಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಈ ತಂಡ ಮಾಡುತ್ತಿದೆ. ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದ ಮುಖ್ಯಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೂಡ ಜರಗಿಸುತ್ತಿದೆ. ಸಂಚಲನ: ಪ್ರಸ್ತುತ ಪೊಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದ್ದು, 16 ವರ್ಷಕ್ಕಿಂತ ಕಡಿಮೆ ವಯೋಮಾನದವರನ್ನು ಕೆಲಸಕ್ಕೆ ನಿಯೋಜಿಸಿಕೊಂಡವರಲ್ಲಿ ತಳಮಳ ಸೃಷ್ಟಿಸಿದೆ. ಕಾರ್ಯಾಚರಣೆಯ ವಿಷಯ ತಿಳಿದು ಹಲವು ಮಂದಿ ಜನರು ತಮ್ಮ ಕಚೇರಿ, ಹೊಟೇಲ್, ಗ್ಯಾರೇಜ್‌ಗಳು ಸೇರಿದಂತೆ ಕರ್ತವ್ಯದ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸಿ ಕೊಂಡಿದ್ದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ.
ಭದ್ರಾವತಿಯ 29; ಶಿಕಾರಿಪುರದ 42 ಬಾಲ ಕಾರ್ಮಿಕರು
ಎಲ್ಲರೂ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು