ತರೀಕೆರೆ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ
ತರೀಕೆರೆ, ಸೆ. 23: ರೈತರಿಂದ ಪಡೆಯಲಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಡಿಸೆಂಬರ್ ಅಂತ್ಯದ ಒಳಗೆ ಇತ್ಯರ್ಥ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ ಅವರು, ಬಳಿಕ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದ್ದರು.
ಕೆಲವು ಪುರಸಭೆ ವ್ಯಾಪ್ತಿಯಲ್ಲಿ 50 ಸಾವಿರಕ್ಕಿಂತ ಅಧಿಕ ಜನಸಂದಣಿಯನ್ನು ಹೊಂದಿದ್ದರೆ ಮಾತ್ರ ಅದರ ಸುತ್ತ ಮುತ್ತಲ 5 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಬಗರ್ ಹುಕುಂ ಸಾಗುವಳಿಗೆ ಅವಕಾಶ ನೀಡಬಹುದು ಎಂದರು.
ಸಾರ್ವಜನಿಕರೊಬ್ಬರ ಕಡತ ಪರಿಶೀಲಿಸಿದ ಜಿಲ್ಲಾಧಿಕಾರಿ, ಕಡತ ನೀಡಿದ ವ್ಯಕ್ತಿಗೆ ಸ್ವೀಕೃತಿ ಪತ್ರ ನೀಡದಿರುವ ಬಗ್ಗೆ ಇಲಾಖಾ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.
ತಾಲೂಕು ಆಡಳಿತವು ಬಗರ್ ಹುಕುಂ ಸಾಗುವಳಿ ವಿಭಾಗಕ್ಕೆ ಸಂಬಂಧಪಟ್ಟಂತೆ ಮೂರು ಹೋಬಳಿಗೆ ಒಬ್ಬರಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂಬ ಅಧಿಕಾರಿಯ ಉತ್ತರಕ್ಕೆ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ಪ್ರತ್ಯೇಕ ಹಂಚಿಕೆ ಮಾಡಿರುವುದು ವ್ಯಾಪಾರ ಮಾಡುವುದಕ್ಕಾ? ಆಡಳಿತವೇನು ಕಿರಾಣಿ ಅಂಗಡಿಯಾ? ಎಂದು ತರಾಟೆಗೆ ತೆಗೆದುಕೊಂಡರು.
ಪುರಸಭೆಯ ಆಸ್ತಿ ವಿಚಾರವಾಗಿ ವಾಜಿ ಅಧ್ಯಕ್ಷ ಈರಣ್ಣ ನೀಡಿದ ದೂರಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಸತ್ಯವತಿ, ಪುರಸಭೆಯ ಆಸ್ತಿಯನ್ನು ಸಂರಕ್ಷಿಸುವುದು ಪುರಸಭಾ ಆಡಳಿತ ಮಂಡಳಿಯ ಜವಾಬ್ದಾರಿ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿ ಇಂತಹ ಅವಾಂತರಗಳು ಸೃಷ್ಟಿಯಾಗುತ್ತದೆ ಎಂದರು.
ಶಿವನಿ ಗ್ರಾಮದ ರೈತರಾದ ಶ್ರೀಕಂಠಪ್ಪ ಮತ್ತು ರಾಜಪ್ಪಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಇದೇ ವೇಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸರೋಜಾ, ಉಪತಹಶೀಲ್ದಾರ್ ಗೋವಿಂದಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಪ್ರಸನ್ನ ಸಣ್ಣಕ್ಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.