ಹೊನ್ನಾವರ: ಮಂಕಿ ಬಣಸಾಲೆಯ ಬಳಿ ಚಿರತೆ ಪ್ರತ್ಯಕ್ಷ
ಹೊನ್ನಾವರ, ಸೆ.23: ತಾಲೂಕಿನ ಮಂಕಿ ಬಣಸಾಲೆಯ ಪ್ರೌಢ ಶಾಲೆಯ ಬಳಿ ಎರಡು ಚಿರತೆಗಳು ಪ್ರತ್ಯಕ್ಷಗೊಂಡು ಸ್ಥಳೀಯರನ್ನು ಭಯಭೀತಗೊಳಿಸಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬಣಸಾಲೆಯ ಪ್ರೌಢ ಶಾಲೆಯ ಕಂಪೌಂಡ್‌ನ ಸನಿಹದಲ್ಲಿರುವ ಮುಸ್ಲಿಮರ ರುದ್ರಭೂಮಿಯ ಗೋಡೆ ಹಾರಿ ಶಾಲೆಯ ಒಳ ಪ್ರವೇಶಿಸಿದ್ದನ್ನು ಒಂದರೆಡು ಜನರು ಕಂಡು ಊರಿನವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಶಾಲೆಯಲ್ಲಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯಬೀತರಾಗಿ ಹೊರ ಓಡಿ ಬಂದರು ಎಂದು ತಿಳಿದು ಬಂದಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಧಿಕಾರಿಗಳು ಚಿರತೆ ಹಿಡಿಯಲು ಸನ್ನದ್ದರಾಗಿ ಆಗಮಿಸಿದ್ದರು. ಆದರೆ, ವಿಶಾಲ ಸ್ಮಶಾನ ಭೂಮಿಯ ಸುತ್ತ ಪೊದೆಗಳು ಬೆಳೆದಿದ್ದು ಯಾವ ಕ್ಷಣದಲ್ಲಾದರೂ ಚಿರತೆ ಎಗರಿ ಬರುವ ಸಾಧ್ಯತೆಗಳಿದ್ದ ಕಾರಣ ಚಿರತೆ ಹಿಡಿಯುವ ಕಾರ್ಯಚರಣೆ ಮಾಡಲಾಗದೇ ಸುಮ್ಮನೆ ನಿಲ್ಲಬೇಕಾಯಿತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಕೂಡಲೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಭಟ್ ಶಾಲೆಗೆ ರಜೆ ಘೋಷಿಸಿದರು. ನಾಳೆ ಪರಿಸ್ಥಿತಿ ಅವಲೋಕಿಸಿ ಶಾಲೆಗೆ ರಜೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.