ರೇಷನ್‌ಗಾಗಿ ಕೂಪನ್ ಪದ್ಧತಿ ವಿರುದ್ಧ ಹಾಸನದಲ್ಲಿ ಸಿಪಿಎಂ ಪ್ರತಿಭಟನೆ
ಹಾಸನ, ಸೆ.24: ಸಾರ್ವಜನಿಕ ಪಡಿತರ(ರೇಶನ್) ವಿತರಣೆಯಲ್ಲಿ ರಾಜ್ಯ ಸರಕಾರ ನೂತನವಾಗಿ ಜಾರಿಗೊಳಿಸಿರುವ ಕೂಪನ್ ಪದ್ಧತಿ ಅತ್ಯಂತ ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿದೆ. ಇದನ್ನು ಕೂಡಲೇ ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಹೇಮಾವತಿ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಡಿತರ ವ್ಯವಸ್ಥೆಯಲ್ಲಿನ ಕೂಪನ್ ಪದ್ಧತಿಯನ್ನು ಕೂಡಲೇ ಹಿಂಪಡೆಯಬೇಕು. ಕೇರಳದಲ್ಲಿ ಸರ್ಕಾರದ ನೇತೃತ್ವದಲ್ಲಿ ಮಾವಳ್ಳಿ ಸ್ಟೋರ್‌ಗಳ ಮೂಲಕ 19 ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವಂತೆ ನಮ್ಮ ರಾಜ್ಯದಲ್ಲೂ ನೀಡಬೇಕು. ರಾಜ್ಯದ ಎಲ್ಲ ರೇಷನ್ ಡಿಪೋಗಳಲ್ಲಿ ಅಕ್ಕಿ, ಸಕ್ಕರೆ, ಸೀಮೆಎಣ್ಣೆಗಳ ಜೊತೆಗೆ ಅಗತ್ಯ ದಿನಬಳಕೆಯ 19 ವಸ್ತುಗಳನ್ನು ಸರ್ಕಾರವೇ ರಿಯಾಯಿತಿ ದರದಲ್ಲಿ ನೀಡಬೇಕು. ಎಲ್ಲಾ ರೇಷನ್ ಡಿಪೋಗಳಲ್ಲೂ ಡಿಜಿಟಲ್ ತೂಕದ ಯಂತ್ರವನ್ನು ಬಳಸಬೇಕು. ಎಪಿಎಲ್, ಬಿಪಿಎಲ್, ಅಂತ್ಯೋದಯದಂತಹ ತಾರತಮ್ಯದ ನೀತಿಯನ್ನು ಕೈಬಿಟ್ಟು ಎಲ್ಲರಿಗೂ ಒಂದೇ ರೀತಿಯ ರೇಷನ್ ಕಾರ್ಡ್ ವಿತರಿಸಬೇಕು. ಎಲ್ಲಾ ಕುಟುಂಬಗಳಿಗೂ ತಲಾ 35 ಕೆ.ಜಿ. ಅಕ್ಕಿಯನ್ನು ನೀಡಬೇಕು. ಎಲ್ಲಾ ಡಿಪೋಗಳಲ್ಲೂ ತಿಂಗಳು ಪೂರ ರೇಷನ್ ವಿತರಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ ಸಾರ್ವತ್ರೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೆಶ್, ಸಂಘಟನಾ ಸಮಿತಿ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್ ಮುಂತಾದವರಿದ್ದರು.