ನ್ಯಾಯಾಂಗ ಸಂಘಪರಿವಾರಕ್ಕೆ ಪೂರಕವಾಗಿದೆ: ಪ್ರಕಾಶ್ ಅಂಬೇಡ್ಕರ್
ಬೆಂಗಳೂರು, ಸೆ.24: ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ದೇಶದ ನ್ಯಾಯಾಂಗ ವ್ಯವಸ್ಥೆ ಸಂಘಪರಿವಾರಕ್ಕೆ ಪೂರಕವಾಗುವಂತಹ ರೀತಿಯಲ್ಲಿ ತೀರ್ಪುಗಳನ್ನು ನೀಡುತ್ತಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ದಲಿತ ಸಂಘಟನೆಗಳ ಒಕ್ಕೂಟ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಪರಿವಾರ ಕೈಗೊಂಡಿರುವ ಜನವಿರೋಧಿ ಕಾರ್ಯಕ್ರಮಗಳ ವಿರುದ್ಧ ನ್ಯಾಯಾಂಗಕ್ಕೆ ಹೋದರೆ, ಸಂಘಪರಿವಾರಕ್ಕೆ ಪೂರಕವಾದಂತಹ ತೀರ್ಪನ್ನೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಆದರೆ, ಬಿಜೆಪಿ ಹತ್ತನೆ ತರಗತಿ ವಿದ್ಯಾಭ್ಯಾಸ ಮಾಡಬೇಕು. ಶೌಚಾಲಯ ಕಟ್ಟಿರುವವರಿಗೆ ಮಾತ್ರ ಮತದಾನದ ಹಕ್ಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತರಲು ಹೊರಟಿದೆ. ಆ ಮೂಲಕ ದಲಿತ ಹಾಗೂ ಹಿಂದುಳಿದವರಿಗೆ ಮತದಾನ ಹಕ್ಕನ್ನು ಕಸಿಯುವಂತಹ ಕೆಲಸ ಮಾಡುತ್ತಿದೆ. ಒಂದು ವೇಳೆ ಇದನ್ನು ಪ್ರಶ್ನಿಸಿ ನ್ಯಾಯಾಲಕ್ಕೆ ಹೋದರೆ ಅಲ್ಲಿಯೂ ಸಂಘಪರಿವಾರಕ್ಕೆ ಪೂರಕವಾದ ತೀರ್ಪು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘಪರಿವಾರ ತನ್ನ ಸಿದ್ದಾಂತವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ದಲಿತ ಮೇಲಿನ ದೌರ್ಜನ್ಯಗಳನ್ನು ನಡೆಸುತ್ತಿದೆ. ದೇಶವನ್ನು ಸಂಪೂರ್ಣವಾಗಿ ಆವರಿಸಿರುವ ಸಂಘಪರಿವಾರದ ಜಾಗದಲ್ಲಿ ದಲಿತ, ಹಿಂದುಳಿದ, ಮುಸ್ಲಿಮರು ಹಾಗೂ ಮಹಿಳೆಯರು ಬದುಕುತ್ತಿದ್ದಾರೆ. ಹೀಗಾಗಿ ಅವರು ಹೇಳಿದ ರೀತಿಯಲ್ಲಿಯೆ ಬದುಕಬೇಕು. ವಿರೋಧಿಸುವವರನ್ನು ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಹೊಸ ಶಿಕ್ಷಣ ನೀತಿ ಸಂಪೂರ್ಣವಾಗಿ ವೈದಿಕ ಶಿಕ್ಷಣವನ್ನು ಜಾರಿ ಮಾಡುವಂತಹದಾಗಿದೆ. ವೈದಿಕ ಶಿಕ್ಷಣದ ಪ್ರಕಾರ ಶೂದ್ರರು ಹಾಗೂ ಅತಿಶೂದ್ರರು ಶಿಕ್ಷಣವನ್ನು ಕಲಿಯುವಂತಿಲ್ಲ. ಇದಕ್ಕೆ ಅಗತ್ಯವಿರುವ ಎಲ್ಲ ಅಂಶಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಜಾರಿ ಮಾಡಲು ಹೊರಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜುಲ್ಫಿಕರ್ ಹಶ್ಮಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾತಂತ್ರ ನಂತರದಲ್ಲಿ ದೇಶಕ್ಕೆ ಹೊಸ ಇತಿಹಾಸ ಬರೆದರು. ಅದರಲ್ಲೂ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನೇಕ ಅಂಶಗಳನ್ನು ಸಂವಿಧಾನದಲ್ಲಿ ನಮೂದಿಸಿದ್ದಾರೆ. ಆದರೆ, ಅಂಬೇಡ್ಕರ್‌ರವರ ಆಶಯಗಳನ್ನು ತಿಳಿಯುವುದರಲ್ಲಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಸಮುದಾಯ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿಂದಳಿದ ಸಮುದಾಯದ ದಲಿತ ಮುಖಂಡ ಶಿವಲಿಂಗಯ್ಯ, ಹಿಂದುಳಿದ ಸಮುದಾಯದ ಮುಖಂಡ ಮುಕುಡಪ್ಪ, ದಸಂಸ ಮುಖಂಡರಾದ ಮೋಹನ್‌ರಾಜ್, ಮುನಿ ಅಂಜಿನಪ್ಪ, ಬಸವರಾಜ ಕೌತಾಳ್ ಮತ್ತಿತರರಿದ್ದರು.
ನ್ಯಾಯಾಂಗದ ಕೈಗೆ ಕತ್ತು, ಚಾಕು ಕೊಡಬಾರದು
ನಮ್ಮ ನ್ಯಾಯಾಂಗ ವ್ಯವಸ್ಥೆಯು ವೈಯಕ್ತಿಕ ವಿಷಯಗಳನ್ನು ಬಗೆಹರಿಸುವಷ್ಟಕ್ಕೆ ಮಾತ್ರ ಸಶಕ್ತವಾಗಿದೆ. ಆದರೆ, ಸಾಮೂಹಿಕ ವಿಷಯಗಳನ್ನು ಬಗೆ ಹರಿಸುವಷ್ಟು ವಿಶಾಲತೆಯನ್ನು ಪಡೆದಿಲ್ಲ. ಹೀಗಾಗಿ ಜನತೆ ಸಾಮೂಹಿಕ ವಿಷಯಗಳನ್ನು ನ್ಯಾಯಾಂಗದಲ್ಲಿ ಹಾಕುವ ಮೂಲಕ ತಮ್ಮ ಕತ್ತು ಹಾಗೂ ಚೂರಿ ಎರಡನ್ನೂ ನ್ಯಾಯಾಂಗದ ಕೈಗೆ ಕೊಟ್ಟು, ಪ್ರಾಣ ಕಳೆದುಕೊಳ್ಳಬಾರದು.
-ಪ್ರಕಾಶ್ ಅಂಬೇಡ್ಕರ್, ಡಾ.ಬಿ.ಆರ್.ಅಂಬೇಡ್ಕರ್‌ರ ಮೊಮ್ಮಗ
ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಯನ್ನು ಮರೆತಿರುವ ಮುಸ್ಲಿಮ್ ಸಮುದಾಯ ಕಾಂಗ್ರೆಸ್‌ನ ಚಮಚಗಳಾಗಿದ್ದಾರೆ. ಕಾಂಗ್ರೆಸ್‌ನ ಸಂಕೋಲೆಯಿಂದ ಹೊರ ಬಂದು, ಅಂಬೇಡ್ಕರ್ ಸಿದ್ಧಾಂತದಲ್ಲಿ ಮುಂದುವರೆಯದಿದ್ದರೆ ಮುಸ್ಲಿಮ್ ಸಮುದಾಯಕ್ಕೆ ಏಳ್ಗೆಯಿಲ್ಲವಾಗಿದೆ. ಈ ಬಗ್ಗೆ ಮುಸ್ಲಿಮ್ ಸಮುದಾಯದ ಮುಖಂಡರು ಗಂಭೀರವಾಗಿ ಚಿಂತಿಸಬೇಕು.
-ಝುಲ್ಫಿಕರ್ ಹಶ್ಮಿ, ಮಾಜಿ ಶಾಸಕ