×
Ad

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ,

Update: 2016-09-24 21:52 IST

ತೀರ್ಥಹಳ್ಳಿ, ಸೆ.24: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಮಾನವೀಯ. ಈ ವಿಚಾರದಲ್ಲಿ ಬಿಜೆಪಿ ನಿಲುವನ್ನು ವಿರೋಧಿಸಿ ತೀರ್ಥಹಳ್ಳಿಯ ಕನ್ನಡಪರ ಸಂಘಟನೆ

ಹಾಗೂ ನಾಗರಿಕ ವೇದಿಕೆ ಒಕ್ಕೂಟದ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ಬೆಂಬಲ ಸೂಚಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಚಿಂತಕ ನೆಂಪೆ ದೇವರಾಜ್ ಮಾತನಾಡಿ, ಅವೈಜ್ಞಾನಿಕ, ಅನ್ಯಾಯ, ಕ್ರೂರ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್‌ನ ಆದೇಶವನ್ನು ಪರಿಪಾಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ನಿಲುವು ಸ್ವಾಗತಾರ್ಹ. ಕಾವೇರಿ ನೀರಿನ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಮಾನ್ಯ ಮಾಡಲಿಲ್ಲ ಎಂಬ ನೆಪವೊಡ್ಡಿ ಮುಖ್ಯಮಂತ್ರಿಯವರನ್ನು ಜೈಲಿಗೆ ಹಾಕಿದರೆ ಅವರೊಂದಿಗೆ ಇಡೀ ತೀರ್ಥಹಳ್ಳಿಯ ಕನ್ನಡಪರ ಒಕ್ಕೂಟ ಜೈಲಿಗೆ ಹೋಗಲು ಸಿದ್ಧ ಎಂದರು.

ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಕೇಂದ್ರ ಸರಕಾರ ಮಧ್ಯ ಪ್ರವೇಶಿಸದೆ ರಾಜ್ಯ ರಾಜ್ಯಗಳ ನಡುವಿನ ಸಂಘರ್ಷದ ಆಟ ನೋಡುತ್ತಿದ್ದು, ರಾಜಕೀಯ ಲಾಭಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾವೇರಿ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಿರುವುದು ಅತ್ಯಂತ ಹೇಯಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾಕಾರರು ತಹಶೀಲ್ದಾರ್ ಎಂ.ಲೋಕೇಶಪ್ಪನವರ ಮೂಲಕ ಮನವಿ ಸಲ್ಲಿಸಿದರು.

ಪ್ರಗತಿಪರ ಹೋರಾಟಗಾರರಾದ ಮಲೆನಾಡು ಸಂಘರ್ಷ ಕ್ರಿಯಾ ಸಮಿತಿಯ ಹೊಸಕೊಪ್ಪಸುಂದರೇಶ್, ಎಸ್.ಇ.ಅಶೋಕ್, ಕನ್ನಡಪರ ಸಂಘಟನೆಯ ನಿಶ್ಚಲ್ ಜಾದೂಗಾರ, ಹರ್ಷೇಂದ್ರ ಕುಮಾರ್ ಬಡುವಳ್ಳಿ, ಹೊನ್ನಾನಿ ದೇವರಾಜ್, ಹಬೀಬಾ ಶೇಷಗಿರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News