×
Ad

ಅಕ್ಷರದಾಸೋಹ ನೌಕರರ ಸಂಘದಿಂದ ಪ್ರತಿಭಟನೆ

Update: 2016-09-24 21:53 IST

ಸಾಗರ, ಸೆ.24: ಕೇಂದ್ರ ಹಾಗೂ ರಾಜ್ಯ ಸರಕಾರ ಬಿಸಿಯೂಟ ತಯಾರಿಕೆಯನ್ನು ಖಾಸಗಿಯವರಿಗೆ ಒಪ್ಪಿಸುವುದನ್ನು ಖಂಡಿಸಿ ಶನಿವಾರ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ವಿಭಾಗೀಯ ಸಮಿತಿ (ಎಐಟಿಯುಸಿ ಸೇರ್ಪಡೆ) ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರಸಭೆ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಕೆ. ಹೊಸಕೊಪ್ಪ, ಕೇಂದ್ರ ಹಾಗೂ ರಾಜ್ಯ ಸರಕಾರ ಬಿಸಿಯೂಟವನ್ನು ಖಾಸಗೀಕರಣಗೊಳಿಸಿ ಅದಮ್ಯ ಚೇತನ ಹಾಗೂ ಇಸ್ಕಾನ್ ಸೇರಿದಂತೆ ಬೇರೆಬೇರೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟಿರುವ ಕ್ರಮ ಖಂಡನೀಯ. ಇದರಿಂದ ಸಾವಿರಾರು ಬಡ ಬಿಸಿಯೂಟ ಕಾರ್ಯಕರ್ತೆಯರ ಕುಟುಂಬ ಬೀದಿಗೆ ಬೀಳುತ್ತದೆ. ಕಡು ಬಡತನದಲ್ಲಿ ಇರುವವರು, ವಿಚ್ಛೇದಿತರು, ವಿಧವೆಯರನ್ನು ನಿರ್ಗತಿಕರನ್ನಾಗಿ ಮಾಡುವ ಹುನ್ನಾರ ಸರಕಾರ ಮಾಡುತ್ತಿದೆ ಎಂದು ದೂರಿದರು. ಸರಕಾರ 20 ಶಾಲೆಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಿ ಬಿಸಿಯೂಟ ತಯಾರಿಸಿ ಎಲ್ಲ ಶಾಲೆಗಳಿಗೂ ಪ್ಯಾಕೇಟ್ ಮಾಡಿ ಊಟ ಕೊಡುವುದನ್ನು ನಿಲ್ಲಿಸಿ, ಈಗಿನ ಪದ್ಧ್ದತಿಯನ್ನು ಮುಂದುವರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ತಮಿಳುನಾಡು ಮಾದರಿಯಲ್ಲಿ ಅಡುಗೆ ಸಿಬ್ಬಂದಿ ಖಾಯಂಗೊಳಿಸುವ ಜೊತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಹಾಲಿ ಇರುವ ಸಂಭಾವನೆಯನ್ನು ಪರಿಷ್ಕರಿಸಿ ಕನಿಷ್ಠ 10ಸಾವಿರ ರೂ, ಸಂಭಾವನೆ ನಿಗದಿಗೊಳಿಸಬೇಕು. ನೌಕರರಿಗೆ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು. ಅಡುಗೆ ಸಿಬ್ಬಂದಿ ಅಪಘಾತದಿಂದ ಆಕಸ್ಮಿಕ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಅಂಗವಿಕಲರಾದರೆ 1.50ಲಕ್ಷ ರೂ. ಪರಿಹಾರ ನೀಡುವ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಡಿ.ಸಿ.ಮಾಯಣ್ಣ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಹಿರೇಮಠ, ತಾಂತ್ರಿಕ ಸಲಹೆಗಾರ ವಿಶ್ವನಾಥ ಗೌಡ, ಸಿದ್ದಾಪುರ ತಾಲೂಕು ಅಧ್ಯಕ್ಷೆ ಸರಸ್ವತಿ ಎನ್. ಭಟ್, ಉಪಾಧ್ಯಕ್ಷೆ ಮೀನಾಕ್ಷಿ ಹಲಗೇರಿ, ಸಾಗರ ತಾಲೂಕು ಅಧ್ಯಕ್ಷೆ ಶೋಭಾ ಸಾತಳಲು, ಸೊರಬ ತಾಲೂಕು ಅಧ್ಯಕ್ಷೆ ಲಲಿತಮ್ಮ ಅಗಸವಳ್ಳಿ, ಹೊಸನಗರ ತಾಲೂಕು ಅಧ್ಯಕ್ಷೆ ಸುಶೀಲಾ ಜಯನಗರ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News