ಹೆಣ್ಣು ಭ್ರೂಣ ಹತ್ಯೆ ತಡೆಗೆ ಆಗ್ರಹಿಸಿ ಧರಣಿ
ಶಿವಮೊಗ್ಗ, ಸೆ.24: ನಗರದ ಕೆಲವು ಖಾಸಗಿ ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಕಾನೂನುಬಾಹಿರವಾಗಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದು, ಇದರ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಶನಿವಾರ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಡಿ.ಸಿ. ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು. ನಗರದ ಕೆಲ ಖಾಸಗಿ ನರ್ಸಿಂಗ್ ಹೋಂ-ಆಸ್ಪತ್ರೆಗಳು ಗುಪ್ತವಾಗಿ, ಕಾನೂನಿಗೆ ವಿರುದ್ಧವಾಗಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿರುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕಾಗಿದೆ ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಶುಕ್ರವಾರ ನಗರದ ಪಾರ್ಕ್ ಬಡಾವಣೆಯ ರಸ್ತೆಯೊಂದರಲ್ಲಿ ಐದಾರು ತಿಂಗಳ ಹೆಣ್ಣು ಭ್ರೂಣವೊಂದು ಚರಂಡಿಯಲ್ಲಿ ಎಸೆದು ಹೋಗಿರುವುದು ಪತ್ತೆಯಾಗಿದೆ. ಈ ಕುರಿತಂತೆ ವೇದಿಕೆಯ ವತಿಯಿಂದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂ, ಸ್ಕಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣದ ಲಿಂಗದ ಗುರುತು ಪತ್ತೆ ಹಚ್ಚುವಂತಿಲ್ಲ. ಹಾಗೆಯೇ ನಿಯಮಕ್ಕೆ ವಿರುದ್ಧವಾಗಿ ಭ್ರೂಣ ಹತ್ಯೆಯೂ ಮಾಡುವಂತಿಲ್ಲ. ಆದರೆ ಕೆಲ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು ಹಣದಾಸೆಗಾಗಿ ಕಾನೂನು ಬಾಹಿರವಾಗಿ ಭ್ರೂಣದ ಲಿಂಗ ಪತ್ತೆ ಹಾಗೂ ಹತ್ಯೆ ನಡೆಸುವ ಕೆಲಸ ನಡೆಸಿಕೊಂಡು ಬರುತ್ತಿರುವ ಶಂಕೆಯಿದೆ ಎಂದು ಧರಣಿ ನಿರತರು ದೂರಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ನಗರದ ಹೊರ ವಲಯದ ಪ್ರದೇಶವೊಂದರ ಬಳಿ ಅನೇಕ ಹೆಣ್ಣು ಭ್ರೂಣಗಳು ಪತ್ತೆಯಾಗಿತ್ತು. ಈ ಕುರಿತಂತೆ ಖಾಸಗಿ ನರ್ಸಿಂಗ್ ಹೋಂವೊಂದರ ವಿರುದ್ಧ್ದ ಪ್ರಕರಣವೂ ದಾಖಲಾಗಿತ್ತು. ಇದೀಗ ನಗರದ ಜನನಿಬಿಡ ಪ್ರದೇಶದಲ್ಲಿಯೇ ಹೆಣ್ಣು ಭ್ರೂಣವೊಂದು ಪತ್ತೆಯಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಹಾಗೆಯೇ ಭ್ರೂಣದ ಲಿಂಗ ಪತ್ತೆ ಹಚ್ಚುವ ಹಾಗೂ ಹತ್ಯೆ ನಡೆಸುವ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಬೇಕು. ಇದಕ್ಕೆ ಸಂಬಂಧಿಸಿದ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಧರಣಿ ನಿರತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಧರಣಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಶೋಕ್‌ಕುಮಾರ್, ತಾಲೂಕು ಅಧ್ಯಕ್ಷ ಕಿರಣ್‌ಕುಮಾರ್, ನಗರಾಧ್ಯಕ್ಷ ರವಿ, ಕಾರ್ಯದರ್ಶಿ ಖಾಸಿಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.