ಉತ್ತಮ ಮೌಲ್ಯಗಳಿಂದ ಭವಿಷ್ಯದ ಹಾದಿ ಸುಗಮ: ರಾಮಕೃಷ್ಣ
ಕುಶಾಲನಗರ, ಸೆ.24 ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ಹಾದಿ ಸುಗಮವಾಗುತ್ತದೆ ಎಂದು ಕಾಲೇಜಿನ ಕಾರ್ಯದರ್ಶಿ ಬಿ. ರಾಮಕೃಷ್ಣ ತಿಳಿಸಿದರು.
ಅವರು ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದುಶ್ಚಟಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಅಮೂಲ್ಯವಾದ ಭವಿಷ್ಯ ವನ್ನು ಕೈಚೆಲ್ಲಬೇಕಾಗುತ್ತದೆ. ಸಮಾಜ ಸರಿಯಿಲ್ಲ ವೆನ್ನುವ ಬದಲು, ನಾವು ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದು ಮುಖ್ಯ ವಾಗುತ್ತದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಹಿರಿಯ ಉಪನ್ಯಾಸಕ ರುದ್ರಪ್ಪ, ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶದಂತೆ ‘ನನಗಲ್ಲ-ನಿಮಗೆ’ ಎಂಬ ಆಧಾರದ ಮೇಲೆ ನಾವು ಯಾವ ಪ್ರತಿಫಲ ಅಪೇಕ್ಷಿಸದೆ ಸಮಾಜದ ಏಳಿಗೆಗಾಗಿ ಹಾಗೂ ದೇಶಕ್ಕೋಸ್ಕರ ನಿಸ್ವಾರ್ಥ ಸೇವೆ ಮಾಡಲು ಮುಂದಾಗಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮಮಾತನಾಡಿ,ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸೋದರತ್ವದ ಜೊತೆ ಭ್ರಾತೃತ್ವದಿಂದ ನಡೆದು ಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕುಶಾಲನಗರ ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಎಚ್.ಎಂ. ರಘು, ಉಪನ್ಯಾಸಕರಾದ ದೇವರಾಜ್‌ಗೌಡ, ಲತಾ, ಗಣಪತಿ, ಚೆನ್ನಕೇಶವಮೂರ್ತಿ ಉಪಸ್ಥಿತರಿದ್ದರು. ಭೂಮಿಕಾ ಪ್ರಾರ್ಥಿಸಿದರು. ಬಸವರಾಜ್ ನಿರೂಪಿಸಿದರು. ಪುಟ್ಟರಾಜ್ ಸ್ವಾಗತಿಸಿದರು. ರುದ್ರೇಶ್ ವಂದಿಸಿದರು.