×
Ad

ರಕ್ತದಾನದಿಂದ ಮಾನವೀಯತೆ ಮೆರೆಯಲು ಗಣ್ಯರ ಕರೆ

Update: 2016-09-24 22:01 IST


 

 ಮಡಿಕೆೇರಿ, ಸೆ.24: ಸಮಾಜದಲ್ಲಿ ಜಾತಿ, ಮತ, ಭೇದ, ಭಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಒಂದೇ ಬಣ್ಣವನ್ನು ಹೊಂದಿರುವ ರಕ್ತಕ್ಕೆ ಯಾವುದೇ ಭೇದವಿಲ್ಲದಿರುವ ಕಾರಣ ರಕ್ತದಾನ ಶಿಬಿರಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ. ಸುವ್ರತ್ ಕುಮಾರ್ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋಟರಿ ಮಿಸ್ಟಿ ಹಿಲ್ಸ್, ಸೂಕ್ಷ್ಮಾಣು ಜೀವ ವಿಭಾಗ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತಗುಂಪು ವರ್ಗೀಕರಣ ಶಿಬಿರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸುವ್ರತ್ ಕುಮಾರ್, ಆಪತ್ಕಾಲದಲ್ಲಿ ಜೀವ ರಕ್ಷಕವಾಗಿರುವ ರಕ್ತ ಯಾವುದೇ ಜಾತಿ, ಧರ್ಮದವರಿಗೆ ಸೇರಿದ್ದಾಗಿದ್ದರೂ ಭೇದ ಭಾವವಿಲ್ಲದೆ ಒಂದು ಜೀವವನ್ನು ಉಳಿಸುವುದರಿಂದ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಶಿಸ್ತಿನ ಜೀವನ ಮೈಗೂಡಿಸಿಕೊಳ್ಳುವ ಮೂಲಕ ಕೊಡಗಿಗೆ ಕೀರ್ತಿ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಅವರು ತಿಳಿಸಿದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮೀ ಮಾತನಾಡಿ, ರಕ್ತದಾನದ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಮಹತ್ತರ ಕಾರ್ಯಕ್ಕೆ ಪ್ರತಿಯೊಬ್ಬರು ಪಾತ್ರರಾಗಬೇಕು ಮತ್ತು ಇಂದು ನಾವು ಸುರಕ್ಷಿತವಾಗಿ ಜೀವನ ಸಾಗಿಸಲು ಸಹಕಾರ ನೀಡುತ್ತಿರುವ ದೇಶದ ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಶಿವಕುಮಾರ್, ರೋಟರಿ ಮಿಸ್ಟಿ ಹಿಲ್ಸ್‌ನ ಪ್ರಮುಖರಾದ ಶಶಿ ಮೊಣ್ಣಪ್ಪಮತ್ತಿತರರು ಪಾಲ್ಗೊಂಡಿದ್ದರು. ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News