ಜಿಪಂ ಅಧ್ಯಕ್ಷರಿಂದ ದಿಢೀರ್ ಭೇಟಿ
ಮೂಡಿಗೆರೆ, ಸೆ.24: ಇಲಾಖೆಗಳಲ್ಲಿ ದಾಖಲಾತಿ ಮತ್ತು ಪ್ರಗತಿ ವರದಿಗಳ ಅಂಕಿ ಅಂಶವನ್ನು ಸರಿಯಾಗಿ ಇಟ್ಟುಕೊಳ್ಳುವುದರ ಜೊತೆಗೆ ಆಯಾ ಇಲಾಖೆಗೆ ಸಂಬಂಧಪಟ್ಟ ಅನುದಾನಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾಲತೇಶ್ ಹೇಳಿದರು. ಅವರು ವಿವಿಧ ಇಲಾಖೆಗಳ ದಿಢೀರ್ ಭೇಟಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಗೆ ಶನಿವಾರ ಭೇಟಿ ನೀಡಿ, ಅಲ್ಲಿನ ಹಾಜರಾತಿ ಮತ್ತು ವಿವಿಧ ಅಭಿವೃದ್ಧಿ ಮತ್ತು ಫಲಾನುಭವಿಗಳ ಆಯ್ಕೆ ಪಟ್ಟಿಗಳನ್ನು ಪರಿಶೀಲಿಸಿದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಗೂ ಜಿಪಂ, ತಾಪಂನಿಂದ ಬಂದ ಅನುದಾನಗಳ ಅಂಕಿ ಅಂಶಗಳನ್ನು ಇಟ್ಟುಕೊಳ್ಳದಿರುವ ಬಗ್ಗೆ ಗಮನಕ್ಕೆ ಬಂದು. ಸಿಬ್ಬಂದಿ ವರ್ಗವನ್ನುದ್ದೇಶಿಸಿ ಮಾತನಾಡಿದ ಅವರು, ಇಲಾಖಾ ಅಂಕಿ ಅಂಶಗಳ ವರದಿಯನ್ನು ಯಾರೇ ಬಂದು ಕೇಳಿದರೂ ತಕ್ಷಣ ತೋರಿಸುವಂತಾಗಬೇಕು. ಈ ಎಲ್ಲದರ ಕುರಿತು ಪ್ರತ್ಯೇಕವಾಗಿ ಅಂಕಿ ಅಂಶಗಳ ವರದಿಯನ್ನು ಜಿಪಂಗೆ ಕಳುಹಿಸಿಕೊಡಬೇಕು. ಇಂತಹ ಸನ್ನಿವೇಶಗಳು ಮತ್ತೆ ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ, ಅಲ್ಲಿನ ಕಡತಗಳನ್ನು ಪರಿಶೀಲಿಸಿದರು.
ಈ ಸಂದರ್ಭ ತಾಪಂ ಅಧ್ಯಕ್ಷ ಕೆ.ಸಿ. ರತನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುದರ್ಶನ್, ಪಂಚಾಕ್ಷರಿ, ಹುಲ್ಲೆಮನೆ ಚಂದ್ರು ಉಪಸ್ಥಿತರಿದ್ದರು.