×
Ad

ಗ್ರಾಮ ಸ್ವರಾಜ್ಯದ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಿದವರು ಶಿವಕುಮಾರ ಶಿವಾಚಾರ್ಯರು: ತಿಪ್ಪೇರುದ್ರಪ್ಪ

Update: 2016-09-24 22:04 IST

ಚಿಕ್ಕಮಗಳೂರು, ಸೆ.24: ಕಂದಾಚಾರ, ಮೂಢನಂಬಿಕೆಯ ವಿರುದ್ಧ ಸಿಡಿದೆದ್ದು, ಸಮಷ್ಠಿ ಪ್ರಜ್ಞೆಯಿಂದ ಮಠವನ್ನು ಮುನ್ನಡೆಸಿದ ಶಿವಕುಮಾರ ಶಿವಾಚಾರ್ಯರು ಗ್ರಾಮ ಸ್ವರಾಜ್ಯದ ಗಾಂಧೀಜಿ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಿದವರು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಬಣ್ಣಿಸಿದರು.

ಅವರು ನಗರದ ಎಸ್‌ಟಿಜೆ ಮಹಿಳಾ ಪದವಿ ಮತ್ತು ಪಿಯು ಕಾಲೇಜುಗಳ ಆಶ್ರಯದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 24ನೆಯ ಶ್ರದ್ಧಾಂಜಲಿ ಸಮಾರಂಭದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

   12ನೆ ಶತಮಾನದಲ್ಲಿ ಬಸವಾದಿ ಶರಣರು ವೌಢ್ಯತೆ ವಿರುದ್ಧ ಹೋರಾಡಿ ಅರಿವು ಮೂಡಿಸಲು ಸಾಮಾಜಿಕ, ಧಾರ್ಮಿಕ ಕ್ರಾಂತಿ ನಡೆಸಿದಂತೆ 20ನೆ ಶತಮಾನದಲ್ಲಿ ಲಿಂಗೈಕ್ಯ ಶ್ರೀಗಳು ಕಾರ್ಯ ನಿರ್ವಹಿಸುವ ಮೂಲಕ ಆಧುನಿಕ ಬಸವಣ್ಣರೆಂದು ಖ್ಯಾತರಾಗಿದ್ದಾರೆ. ದುಗಾಣಿಮಠವೆಂದು ಅಪಹಾಸ್ಯ ಮಾಡುತ್ತಿದ್ದ ಶ್ರೀ ಮಠವನ್ನು ಕಟ್ಟಿ, ಬೆಳೆಸಿ ಪ್ರಮುಖ ಧಾರ್ಮಿಕ ಕೇಂದ್ರವಾಗಿಸಿದರು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಹಲವಾರು ಶಾಲೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದರು ಎಂದು ಮಾತನಾಡಿದರು.

  ಚುಟುಕು ಕವಿ, ಸಾಹಿತಿ ಎ.ಜಿ.ವಿಶ್ವಮೂರ್ತಿ ಮಾತನಾಡಿ, ಸಿರಿಗೆರೆಮಠವನ್ನು ಜಗದ್ವಿಖ್ಯಾತಿಗೊಳಿಸಿದ ಕೀರ್ತಿ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಸಿರಿಗೆರೆ ತರಳುಬಾಳು ಮಠಕ್ಕೆ ಸಂಬಂಧಪಟ್ಟಂತೆ 189 ಶಿಕ್ಷಣ ಸಂಸ್ಥೆಗಳು ಇಂದು ಜ್ಞ್ಞಾನ ದಾಸೋಹದಲ್ಲಿ ತೊಡಗಿರುವುದಕ್ಕೆ ಅವರೇ ಪ್ರೇರಕರು. ಕಾಶಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಶ್ರೀಗಳು ಜ್ಞಾನದ ಮೇರು ಶಿಖರವಾಗಿದ್ದರು. ಸಮಾಜಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟ ಹಿರಿಮೆ ಹೊಂದಿದ್ದ ಅವರು, ರಟ್ಟೆ ಇದ್ದಾಗ ದುಡಿಯಬೇಕು, ನೆತ್ತಿ ತುಂಬುವರೆಗೂ ಓದಬೇಕೆಂದು ಹೇಳುತ್ತಿದ್ದರೆಂದು ನುಡಿದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಎನ್.ಶಿವಣ್ಣ ಮತ್ತು ಪ್ರೋ. ಪಾಲಾಕ್ಷರೆಡ್ಡಿ ಮಾತನಾಡಿ ಲಿಂಗೈಕ್ಯಶ್ರೀಗಳ ಪ್ರಗತಿಪರ ಜಾತ್ಯಾತೀತ ನಿಲುವನ್ನು ಬಣ್ಣಸಿದರು. ಎಸ್‌ಟಿಜೆ ಶಿಕ್ಷಣಸಂಸ್ಥೆಯ ವಲಯಾಧಿಕಾರಿ ಕೆ.ಎಸ್. ನಂಜುಂಡಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆ.ಕೆ.ಭಾರತ ಸ್ವಾಗತಿಸಿ ಪ್ರಾಸ್ತಾವಿಸಿದ್ದು, ಪಿಯು ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಹಳದಪ್ಪ ವಂದಿಸಿದರು. ಉಪನ್ಯಾಸಕಿ ಲತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News