ಯಾವುದೇ ಧರ್ಮ ಸ್ವೀಕರಿಸುವ ಹಕ್ಕು ಸಂವಿಧಾನ ನೀಡಿದೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ. 25: ಯಾವುದೇ ಧರ್ಮವನ್ನು ಯಾವುದೇ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಸ್ವೀಕರಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.
ರವಿವಾರ ನಗರದ ಮಿಷನ್ ರಸ್ತೆಯ ಹಡ್ಸನ್ ಸಮುದಾಯ ಭವನದ ‘ಹಡ್ಸನ್ ಸ್ಮಾರಕ ದೇವಾಲಯದ 112ನೆ ವಾರ್ಷಿಕೋತ್ಸವ ಸಮಾರಂಭ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಕ್ತ ಮನಸ್ಸಿನಿಂದ ಯಾವುದೇ ಧರ್ಮ ಸ್ವೀಕರಿಸಬಹುದು. ಇದಕ್ಕೆ ಯಾವುದೇ ರೀತಿಯ ಅಡೆತಡೆಗಳಿಲ್ಲ. ಅಲ್ಲದೆ, ಸಂವಿಧಾನವೇ ನಮಗೆ ಧರ್ಮ ಸ್ವೀಕರಿಸುವ ಹಕ್ಕು ನೀಡಿದೆ ಎಂದು ತಿಳಿಸಿದರು.
ಹಡ್ಸನ್ ಅವರು ಭಾರತಕ್ಕೆ ಭೇಟಿ ನೀಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿದರು. ಅದೇ ರೀತಿ, ಸಮಾನ ಶಿಕ್ಷಣ ನೀಡುವ ಮೂಲಕ ಎಲ್ಲರಿಗೂ ಅನುಕೂಲವಾಯಿತು ಎಂದ ಅವರು, ಬೆಂಗಳೂರು ನಿವಾಸಿಗಳಿಗೆ ಹಡ್ಸನ್ ಸ್ಮಾರಕ ಚಿರಪರಿಚಯವಾಗಿದ್ದು, ಇದೊಂದು ಐತಿಹಾಸಿಕ ಕಟ್ಟಡ ಎಂದು ಬಣ್ಣಿಸಿದರು.
ಶಾಂತಿ ಸಮುದಾಯ: ತಾನು ಗೃಹ ಸಚಿವನಾಗಿದ್ದು, ಇದುವರೆಗೂ ಕ್ರೈಸ್ತ ಸಮುದಾಯದ ವಿರುದ್ಧ ಯಾರು ದೂರು ನೀಡಿಲ್ಲ. ಕ್ರೈಸ್ತರ ಮೇಲೆ ಕ್ರೈಸ್ತರು ಬಿಟ್ಟರೆ, ಬೇರೆ ಯಾರೂ ಆರೋಪ ಮಾಡಿಲ್ಲ. ಹೀಗಾಗಿ, ಇದೊಂದು ಶಾಂತಿಗೆ ಹೆಸರಾಗಿರುವ ಸಮುದಾಯ ಎಂದು ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಮಾತ್ರ ನಾವು ಸಮಾಜವನ್ನೂ ಬದಲಾವಣೆ ಮಾಡಲು ಸಾಧ್ಯ. ಅದೇ ರೀತಿ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಬೇಕು. ಈ ಎರಡು ಕ್ಷೇತ್ರಗಳನ್ನು ಕ್ರೈಸ್ತ ಮಿಷನರಿಗಳು ಬಹಳ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತರ್ಹ ಎಂದರು.
ವಿಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿ ಮಾತನಾಡಿ, ಹದಿನೇಳನೆ ವಯಸ್ಸಿನಲ್ಲಿಯೇ ಹಡ್ಸನ್ ಅವರು ಪಾದ್ರಿಯಾಗಿ ಸಮಾಜ ಸೇವೆಗೆ ಮುಂದಾದರು. ಭಾರತಕ್ಕೆ ಮುದ್ರಣ ತಂತ್ರಜ್ಞಾನವನ್ನು ಪರಿಚಯ ಮಾಡಿದಲ್ಲದೆ, ಸರ್ವ ಜನಾಂಗಕ್ಕೂ ಶಿಕ್ಷಣ ನೀಡುವಂತೆ ಕ್ರೈಸ್ತ ಮಿಷನರಿಗಳಿಗೆ ಸೂಚಿಸಿದ ಕಾರಣ, ದೇಶದಲ್ಲಿ ವಿಶ್ವವಿದ್ಯಾಲಯಗಳು ಹುಟ್ಟಿಕೊಂಡವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ, ಹಡ್ಸನ್ ದೇವಾಲಯದ ಪ್ರಮುಖರಾದ ಸಾಲೋಮನ್ ಥಾಮಸ್,ರೂತ್‌ರೇಖಾ ಮೈಕಲ್, ಬಿಷಪ್ ಕಾಟನ್ ಬಾಲಕರ ಶಾಲೆ ಸಂಸ್ಥಾಪಕ ಅಧ್ಯಕ್ಷ ಡಾ.ಅಬ್ರಹಂ ಎಬಿನೆಜರ್, ಮೋಹನ್ ದತ್ ಸಾಲೋಮನ್, ಡಿ.ಜಯಪ್ರಭು ಹಾಜರಿದ್ದರು.