×
Ad

ಪರಿಸರ ರಕ್ಷಿಸಿ ಪ್ರವಾಸೋದ್ಯಮ ಬೆಳೆಸಿ : ಶಾಸಕ ಅಪ್ಪಚ್ಚು ರಂಜನ್

Update: 2016-09-25 22:17 IST

 ಮಡಿಕೇರಿ, ಸೆ.25: ಪರಿಸರ ರಕ್ಷಣೆಯೊಂದಿಗೆ ಕೊಡಗಿನ ಪ್ರವಾಸೋದ್ಯಮವನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. 

ಜವಾಬ್ದಾರಿಯುತ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗೋ ಹೆರಿಟೇಜ್ ರನ್ ಕೂರ್ಗ್ ಮ್ಯಾರಥಾನ್ ಮಡಿಕೇರಿಯಲ್ಲಿ ನಡೆಯಿತು. 10 ಕಿ.ಮೀ. ಮತ್ತು 5 ಕಿ.ಮೀ. ಅಂತರದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಅಗತ್ಯ ಎಂದರು. ಪರಿಸರ ಜಾಗೃತಿಗಾಗಿ ಈ ರೀತಿಯ ಮತ್ತಷ್ಟು ಕಾರ್ಯಕ್ರಮಗಳು ನಡೆಯಬೇಕೆಂದು ತಿಳಿಸಿದ ಅವರು ಪ್ರಕೃತಿಯ ಕೊಡುಗೆಯಾಗಿರುವ ಕೊಡಗಿನ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಹಸಿರು ಪರಿಸರದ ಮೂಲಕವೇ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆಗಳು ಜಾರಿಗೊಳ್ಳಬೇಕೆಂದು ಶಾಸಕ ರಂಜನ್ ಹೇಳಿದರು.

21 ಕಿ.ಮೀ. ಅಂತರದ ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಪ್ರವಾಸೋದ್ಯಮ ಸಂಬಂಧಿತ ಪ್ರಚಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಸ್ಥಳೀಯ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು. ಪರಿಸರ ಮಾಲಿನ್ಯ ತಡೆಗಟ್ಟಿ, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಕೊಡಗನ್ನು ಪರಿವರ್ತಿಸುವಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆಯೂ ಮನವಿ ಮಾಡಿದರು.

   

ಜಿಪಂ ಸಿಇಒ ಚಾರುಲತಾ ಸೋಮಲ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಪ್ರವಾ ಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಪೌರಾಯುಕ್ತೆ ಪುಪ್ಪಾವತಿ ಹಾಜರಿದ್ದರು. ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್ ಗಳು, ಜಿಪಂ ಸಿಬ್ಬಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಕೊಡಗು ಜಿಲ್ಲಾಡಳಿತ, ಕೊಡಗು ಜಿಪಂ ವತಿಯಿಂದ ಗೋ ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಜರಗಿದ ಗೋ ಹೆರಿಟೇಜ್ ರನ್ ಕೂರ್ಗ್ ಮೆರಥಾನ್‌ಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು. ಮಳೆ, ಮಂಜಿನ ನಡುವೇ 170ಕ್ಕೂ ಅಧಿಕ ಓಟಗಾರರು ಪಾಲ್ಗೊಂಡು ಪರಿಸರ ಸ್ನೇಹಿ ಪ್ರವಾಸೋದ್ಯಮದ ಜಾಗೃತಿ ಸಂದೇಶ ಸಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News