ಅಂಧಾನುಕರಣೆ ವಿಷಾದನೀಯ: ಎ.ಎನ್. ಮಹೇಶ್ ಅಭಿಮತ

Update: 2016-09-25 16:56 GMT

ಚಿಕ್ಕಮಗಳೂರು, ಸೆ.25: ವಿಜ್ಞಾನ ಯುಗದಲ್ಲಿ ವೌಢ್ಯತೆ, ಅಂಧಾನುಕರಣೆ ಭಾನಾಮತಿ ಮಾಟ, ಮಂತ್ರ ಇತ್ಯಾದಿಗಳು ಆಚರಣೆಯಲ್ಲಿ ಇರುವುದು ವಿಷಾದನೀಯ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್ ತಿಳಿಸಿದರು.

ಅವರು ಜಿಲ್ಲಾ ವಿಜ್ಞಾನ ಕೇಂದ್ರ, ಬೇಲೂರು ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಎನ್ನೆಸ್ಸೆಸ್ ಘಟಕ, ಮತ್ತು ವಿಜ್ಞಾನ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮವನ್ನು ದೀಪಕ್ಕೆ ನೀರನ್ನು ಹಾಕಿ ಬೆಳಗಿಸುವ ಪವಾಡದ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅತೀಂದ್ರಿಯ, ಅತಿಮಾನುಷ ಶಕ್ತಿಯಿಂದ ನಡೆಯುತ್ತವೆಂದು ಹೇಳುವ ಕೆಲವು ಘಟನೆಗಳನ್ನು ಪವಾಡಗಳೆಂದು ನಂಬುತ್ತಾರೆ. ಇದು ಸತ್ಯವೇ? ಇಂತಹ ಶಕ್ತಿ ಇದೆಯೇ? ಇದ್ದರೇ ಆ ಶಕ್ತಿಯಿಂದ ಮಾನವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಲ್ಲವೇ? ಎಂದು ಪ್ರಶ್ನಿಸುತ್ತಾ, ಯಾವುದೇ ಘಟನೆ ಸೃಷ್ಟಿಯ ನಿಯಮಗಳನ್ನು ಮೀರಿ ಸಂಭವಿಸುವುದಿಲ್ಲ. ಎಲ್ಲಾ ಘಟನೆಗಳ ಹಿಂದೆ ಕಾರಣ ಪರಿಣಾಮಗಳು ಇದ್ದೇ ಇರುತ್ತದೆ. ಇದನ್ನು ಪರಿಶೀಲಿಸಿ, ಪ್ರಶ್ನಿಸಿ ಕಂಡುಕೊಳ್ಳಬೇಕು. ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವೌಢ್ಯತೆಯ ಅಂಧವಿಶ್ವಾಸದಲ್ಲಿ ತೊಡಗಬಾರದೆಂದು ಕರೆ ನೀಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಡಾ. ಎಚ್.ಆರ್.ಸ್ವಾಮಿ ಮತ್ತು ತಂಡದವರು ನಾಲಿಗೆಯ ಮೇಲೆ ಕರ್ಪೂರ ಬೆಳಗಿಸುವುದು, ಬೆಂಕಿಯ ಪಂಜನ್ನು ಮೈಗೆ ಸವರಿಕೊಳ್ಳುವುದು, ಕೆಂಡ ಹಾಯುವ ಪವಾಡ ಮಾಡಿ ಬೆಂಕಿ ಸುಡದಿರುವುದಕ್ಕೆ ವೈಜ್ಞಾನಿಕ ಕಾರಣವೇನು ಎಂಬುದನ್ನು ತೋರಿಸಿದರು.

2 ಗಂಟೆಗೂ ಹೆಚ್ಚು ಸಮಯ ಪವಾಡಗಳನ್ನು ಮಾಡುತ್ತಾ ಅದರ ಹಿಂದಿರುವ ವೈಜ್ಞಾನಿಕ ಸತ್ಯ ವನ್ನು ತಿಳಿಸಿದರು.

 ಎನ್ನೆಸ್ಸೆಸ್ ಅಧಿಕಾರಿ, ಉಪನ್ಯಾಸಕ ಸಿ.ಎಚ್. ನಾಗರಾಜ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಗಣಾಚಾರಿ, ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ. ನೀಲಕಂಠಪ್ಪ, ರಾಜ್ಯ ಪರಿಷತ್ತಿನ ಸದಸ್ಯ ಟಿ.ಜಿ.ಕೆ. ಅರಸ್, ಪದಾಧಿಕಾರಿಗಳಾದ ಸತ್ಯ ನಾರಾಯಣ, ಓಂಕಾರಪ್ಪ, ಕೆ.ಜಿ.ನೀಲಕಂಠಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News