ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಎಂ.ಎನ್.ಷಡಕ್ಷರಿ

Update: 2016-09-25 16:58 GMT

 ಚಿಕ್ಕಮಗಳೂರು, ಸೆ.25: ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ರೂಪುಗೊಳ್ಳುವುದರಿಂದ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದು ಶಿಕ್ಷಣತಜ್ಞ, ಪರಿಸರವಾದಿ ಎಂ.ಎನ್.ಷಡಕ್ಷರಿ ಅಭಿಪ್ರಾಯಪಟ್ಟರು.

ಅವರು ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಉತ್ತಮ ಕಾರ್ಯನಿರ್ವಹಿಸಿದ ಶಾಲಾ ಶಿಕ್ಷಕರಿಗೆ ಕೊಡಮಾಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಮುಖದಲ್ಲಿ ಗೆಲುವು ಮತ್ತು ಮಂದಹಾಸವನ್ನು ಸೃಷ್ಟಿಸುವುದೇ ಶಿಕ್ಷಕರಿಗೆ ಸಿಗಬಹುದಾದ ದೊಡ್ಡ ಪುರಸ್ಕಾರ. ವಿದ್ಯಾರ್ಥಿಗಳು ಶಿಕ್ಷಕರ ನಿಜವಾದ ವೌಲ್ಯಮಾಪಕರೂ ಹೌದು. ಶಿಕ್ಷಣ ಸುಧಾರಣೆಗಾಗಿ ಕಾರ್ಯ ನಿರ್ವಹಿಸಿದ್ದ ಕೊಠಾರಿ ಆಯೋಗದ ಉಲ್ಲೇಖವನ್ನು ಪ್ರಸ್ತಾಪಿಸಿದ ಷಡಕ್ಷರಿ, ದೇಶದ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ವಿನಯವಂತಿಕೆ, ಉಪಕಾರ ಸ್ಮರಣೆ, ಸಮಾಜ ಪ್ರೀತಿ, ಅಧ್ಯಯನಶೀಲತೆ ಉತ್ತಮ ಶಿಕ್ಷಕನ ಲಕ್ಷಣ ಎಂದು ಬಣ್ಣಿಸಿದ ಷಡಕ್ಷರಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ರೋಲ್ ಮಾಡೆಲ್‌ಗಳು. ಹೃದಯ ಸ್ಪರ್ಶಿಸುವ ಮನಸ್ಸು ಮುಟ್ಟುವಂತೆ ಪಾಠಮಾಡುವವನೇ ಶ್ರೇಷ್ಠ ಶಿಕ್ಷಕ ಎಂದು ನುಡಿದರು.

 ಚಾಣಕ್ಯ, ರಾಧಾಕೃಷ್ಣನ್, ಎಪಿಜೆ ಅಬ್ದುಲ್ ಕಲಾಂ ಜಗತ್ತಿನ ಶ್ರೇಷ್ಠ ಶಿಕ್ಷಕರ ಪರಂಪರೆಗೆ ಸೇರಿದವರು. ಸಮಾಜಮುಖಿ ಚಿಂತನೆಯ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕ ಸಮುದಾಯ ಮಹತ್ವದ ಪಾತ್ರವಹಿಸಬೇಕೆಂಬುದು ಸಮಾಜದ ಆಶಯವೆಂದು ಷಡಕ್ಷರಿ ಮಾತನಾಡಿದರು.

ನಗರದ ಬೇಲೂರುರಸ್ತೆ ಟಿಜಿಎಂಎಸ್ ಶಾಲಾ ಶಿಕ್ಷಕಿ ಎ.ಪಿ.ಸುಮಿತ್ರಾ ಮತ್ತು ಮರ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಎಂ.ಕೆ.ನಾಗೇಶಾಚಾರ್ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಯೋಜನಾ ನಿರ್ದೇಶಕ ವೆಂಕಟೇಶ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಕುರಿತಂತೆ ಮಾತನಾಡಿದರು. ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್.ಸುಧೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಎಂ.ಎಸ್.ಸುಧೀರ್ ಸ್ವಾಗತಿಸಿದರು. ಕಾರ್ಯದರ್ಶಿ ರಘುರಾಮ್ ವಂದಿಸಿದರು. ಸಾದ್ವಿನ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News