ಪಡಿತರ ಗೊಂದಲಗಳಿಗೆ ಅಧಿಕಾರಿಗಳೇ ಕಾರಣ: ಸಚಿವ ಖಾದರ್

Update: 2016-09-25 17:00 GMT

ತೀರ್ಥಹಳ್ಳಿ,ಸೆ.25: ರಾಜ್ಯಾದ್ಯಂತ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ವಿಚಾರದಲ್ಲಿ ಬಹಳಷ್ಟು ಗೊಂದಲಗಳು ಕೇಳಿಬರುತ್ತಿವೆೆ. ಈ ವಿಚಾರಗಳಲ್ಲಿ ಗೊಂದಲ ಉಂಟಾಗಲು ಅಧಿಕಾರಿಗಳು ಮಾಡಿದ ತಪ್ಪೇ ಕಾರಣವಾಗಿದ್ದು, ಈ ತಪ್ಪಿನಿಂದ ಜನಪ್ರತಿನಿಧಿಗಳ ಮೇಲೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದ್ದು, ಕೂಪನ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಬೋಗಸ್ ಕಾರ್ಡ್‌ಗಳಿಗೆ ಕಡಿವಾಣ ಬಿದ್ದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಆಹಾರ ಮತ್ತು ಸರಬರಾಜು ಇಲಾಖೆ ವತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಆಹಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪಡಿತರ ಚೀಟಿ ಹೊಂದಿದವರು ಬಹಳಷ್ಟು ಮಂದಿ ಆಧಾರ್ ಕಾರ್ಡ್ ನೋಂದಣಿ ಮಾಡಿಕೊಂಡಿಲ್ಲ. ಶೀಘ್ರವೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಅಗತ್ಯತೆ ಇದೆ. ಈಗಾಗಲೇ ಪಡಿತರ ವ್ಯವಸ್ಥೆ ಸುಗಮವಾಗಲು ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಸೀಮೆಎಣ್ಣೆ ಮುಕ್ತ ಮಾರುಕಟ್ಟೆ ಮಾಡಲು ಚಿಂತನೆ ನಡೆಸಲಾಗಿದೆ. ಕೇಂದ್ರ ಸರಕಾರದ ಉಜ್ವಲ್ ಯೋಜನೆಯಡಿಯಲ್ಲಿ ಗ್ಯಾಸ್ ಉಳ್ಳವರಿಗೆ ಸೀಮೆ ಎಣ್ಣೆ ನೀಡುತ್ತಿಲ್ಲ. ಸೀಮೆ ಎಣ್ಣೆಯ ಸಮಸ್ಯೆಗೆ ಕೇಂದ್ರ ಸರಕಾರವೇ ಕಾರಣವಾಗಿದ್ದು, ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಉಜ್ವಲ ಯೋಜನೆಯ ಸೀಮೆ ಎಣ್ಣೆ ವಂಚಿತರಿಗೆ ಉಚಿತ ಗ್ಯಾಸ್ ನೀಡುವ ಬಗ್ಗೆ ಹಾಗೂ ಎರಡು ಸೋಲಾರ್ ದೀಪ ನೀಡುವ ಬಗ್ಗೆ ವಿಶೇಷ ಯೋಜನೆ ರೂಪಿಸಿದೆ ಎಂದರು.

ಇಲಾಖೆಯಲ್ಲಿ ಸುಧಾರಣೆಯಾಗಬೇಕಾದರೆ ಬದಲಾವಣೆಯಾಗಬೇಕು. ಬದಲಾವಣೆ ಆಗಬೇಕಾದರೆ ಜನತೆ ಮನೋಭಾವ ಬದಲಾಯಿಸಿಕೊಳ್ಳಬೇಕಾಗಿದೆ. ಆನ್‌ಲೈನ್ ಮೂಲಕ ಪಡಿತರ ಚೀಟಿಯನ್ನು ಪಡೆಯುವಂತೆ ಈಗಾಗಲೇ ಇಲಾಖೆ ತಿಳಿಸಿದ್ದು, ಆನ್‌ಲೈನ್ ಮೂಲಕ ಪಡಿತರ ಚೀಟಿ ಪಡೆದರೆ ಮೂರು ದಿನದಲ್ಲಿ ಅಧಿಕಾರಿಗಳ ಕೈಸೇರಿ 10 ದಿನಗಳ ನಂತರ ಗ್ರಾಹಕರಿಗೆ ಅಂಚೆ ಮೂಲಕ ಪಡಿತರ ಚೀಟಿ ದೊರೆಯುತ್ತದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕು. ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿನ ಗುಣಮಟ್ಟದ ಬಗ್ಗೆ ಚರ್ಚಿಸಲು, ತಾಲೂಕು, ಜಿಲ್ಲಾ ಹಾಗೂ ನಗರ ಮಟ್ಟಗಳಲ್ಲಿ ಜಾಗೃತಿ ಸಮಿತಿಯನ್ನು ರಚಿಸಲಾಗಿದೆ ಎಂದರು.

 ಪ್ರತೀ 15 ದಿನಗಳಿಗೊಮ್ಮೆ ತಾಲೂಕಿನಲ್ಲಿ ಆಹಾರ ಅದಾಲತ್ ಹಾಗೂ ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಆಹಾರ ಅದಾಲತ್ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಭೆಯಲ್ಲಿ ಕ್ಷೇತ್ರದ ಶಾಸಕ ಕಿಮ್ಮನೆ ರತಾಕರ, ತಾಪಂ ಅಧ್ಯಕ್ಷೆ ನವಮಣಿ, ತಹಶೀಲ್ದಾರ್ ಲೋಕೇಶಪ್ಪ, ಪಪಂ ಅಧ್ಯಕ್ಷ ಸಂದೇಶ್ ಜವಳಿ, ತಾಪಂ ಪ್ರಭಾರ ಅಧಿಕಾರಿ ಡಾ. ಮಂಜುನಾಥ್‌ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News