ಮಕ್ಕಳಿಗೆ ಒಳ್ಳೆಯ ನಡೆ-ನುಡಿ ಕಲಿಸಿ: ನ್ಯಾ.ಪ್ರಭಾವತಿ

Update: 2016-09-25 17:01 GMT

ಚಿಕ್ಕಮಗಳೂರು, ಸೆ.25: ಸಮಾಜ ಮತ್ತು ಮಕ್ಕಳು ಅಡ್ಡದಾರಿ ತುಳಿಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ್ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸ್ನೇಹಿ ಕಾನೂನು ಮತ್ತು ರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಅಪವಾದಗಳು ವೌಲ್ಯಗಳನ್ನು ಅಲುಗಾಡಿಸುತ್ತಿವೆ. ಮಕ್ಕಳು ಒಳ್ಳೆಯ ಅಂಕ ತೆಗೆಯಬೇಕೆಂದು ಬಯಸುತ್ತಿದ್ದೇವೆ ಹೊರತು, ಸಂಸ್ಕಾರ-ಸಂಸ್ಕೃತಿ ಕಲಿಸುತ್ತಿಲ್ಲ. ಇಂದು ಟಿವಿಯಲ್ಲಿ ಮೂಡಿಬರುವ ಧಾರವಾಹಿ ಮತ್ತಿತರ ಕಾರ್ಯಕ್ರಮಗಳನ್ನು ನೋಡಿ ಮಕ್ಕಳು ಹಾದಿತಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳಿಗೆ ಒಳ್ಳೆಯ ನಡೆ-ನುಡಿ ಕಲಿಸಲು ಪೋಷಕರಿಗೆ ಸಮಯ ಇಲ್ಲ. ತಂದೆ-ತಾಯಿಗೆ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಅರಿವಿಲ್ಲ. ಹೊಂದಾಣಿಕೆ ಸ್ವಭಾವ ಬೆಳೆಸುತ್ತಿಲ್ಲ. ಅವಿಭಕ್ತ ಕುಟುಂಬಗಳು ಮರೆಯಾಗಿ ತಂದೆ-ತಾಯಿ, ಮಕ್ಕಳು ಎಂಬ ನಾಲ್ಕು ಜನರ ಕುಟುಂಬಗಳು ಸೃಷ್ಟಿಯಾಗುತ್ತಿವೆ ಎಂದು ವಿಷಾದಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದಯಾನಂದ ವಿ.ಹಿರೇಮಠ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಸಿ.ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಎಚ್.ಸಿ.ನಟರಾಜ್, ತಾಪಂ ಇಒ ವೈ.ಜಿ.ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News