ಡುಟರ್ಟ್ ರ ಮಾದಕ ದ್ರವ್ಯ ವಿರುದ್ಧದ ಸಮರದಲ್ಲಿ ಹಸ್ತಕ್ಷೇಪ ಬೇಡ

Update: 2016-09-25 18:49 GMT

ವಿಶ್ವಸಂಸ್ಥೆ, ಸೆ. 25: ಫಿಲಿಪ್ಪೀನ್ಸ್‌ನ ನೂತನ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ‘ಅಭೂತಪೂರ್ವ’ ಜನಾದೇಶ ಪಡೆದಿದ್ದಾರೆ ಹಾಗೂ ಪಾತಕ ಜಗತ್ತಿನ ವಿರುದ್ಧ ಅವರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಜಗತ್ತು ಹಸ್ತಕ್ಷೇಪ ನಡೆಸಬಾರದು ಎಂದು ದೇಶದ ವಿದೇಶ ಸಚಿವ ಪರ್ಫೆಕ್ಟೊ ಯಸಯ್ ಶನಿವಾರ ವಿಶ್ವಸಂಸ್ಥೆಗೆ ಹೇಳಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಮಹಾಧಿವೇಶನದಲ್ಲಿ ಮಾತನಾಡಿದ ಯಸಯ್, ಅಕ್ರಮ ಮಾದಕ ದ್ರವ್ಯ ಉತ್ಪಾದನೆ, ವಿತರಣೆ ಮತ್ತು ಬಳಕೆ ಸೇರಿದಂತೆ ಭ್ರಷ್ಟ ಹಾಗೂ ಆಳವಾಗಿ ಬೇರೂರಿರುವ ಪದ್ಧತಿಗಳಿಂದ ಫಿಲಿಪ್ಪೀನ್ಸ್ ಜನರನ್ನು ಪಾರು ಮಾಡಲು ಡುಟರ್ಟ್ ಸರಕಾರ ದೃಢನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

‘‘ಆದರೆ, ನಾವು ತೆಗೆದುಕೊಂಡ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸುದ್ದಿಯಾಗಿವೆ ಹಾಗೂ ಕೆಟ್ಟ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಗಮನವನ್ನು ಸೆಳೆದಿವೆ’’ ಎಂದರು.

‘‘ಅನಗತ್ಯ ಹಸ್ತಕ್ಷೇಪಗಳನ್ನು ನಡೆಸದೆ ನಮ್ಮ ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಹಾಗೂ ದೇಶಿ ಸವಾಲುಗಳೊಂದಿಗೆ ವ್ಯವಹರಿಸಲು ಅವಕಾಶ ಮಾಡಿಕೊಡಿ ಎಂಬುದಾಗಿ ನಾವು ಪ್ರತಿಯೊಬ್ಬರನ್ನೂ ಒತ್ತಾಯಿಸುತ್ತೇವೆ’’ ಎಂದು ಫಿಲಿಪ್ಪೀನ್ಸ್ ವಿದೇಶ ಸಚಿವ ಹೇಳಿದರು. ಮಾದಕ ದ್ರವ್ಯ ಪಿಡುಗು ಮತ್ತು ಅಪರಾಧವನ್ನು ಮೂಲೋತ್ಪಾಟನೆಗೊಳಿಸುತ್ತೇನೆ ಎಂಬ ಭರವಸೆ ನೀಡಿದ್ದ ಡುಟರ್ಟ್, ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News