‘ಡ್ರಾಮಾ ಜೂನಿಯರ್ಸ್’ ವಿನ್ನರ್ಸ್ ಯಾರು ಗೊತ್ತೇ?
ಬೆಂಗಳೂರು, ಸೆ.26: ಕರ್ನಾಟಕದ ಕಿರುತೆರೆಯಲ್ಲಿ ಹೊಸತೊಂದು ಸಂಚಲನ ಮೂಡಿಸಿದ್ದ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್. ಕಳೆದ ಕೆಲವು ತಿಂಗಳುಗಳಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಪುಟಾಣಿಗಳ ಡ್ರಾಮಾ ಶೋ ಕರ್ನಾಟಕದ ಮನೆಮಂದಿಯ ಮನಸೂರೆಗೊಂಡಿತ್ತು. ಖ್ಯಾತ ನಟ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟಿ ಲಕ್ಷ್ಮೀ ಮತ್ತು ನಟ ವಿಜಯರಾಘವೇಂದ್ರ ಅವರು ತೀರ್ಪುಗಾರರಾಗಿದ್ದು, ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್‌ನ ಅಂತಿಮ ಸ್ಪರ್ಧೆ ಸೆ.25ರಂದು ನಡೆದಿದೆ. ಫಿನಾಲೆಯಲ್ಲಿ ಇಬ್ಬರು ವಿಜೇತರಾಗಿ ಹೊರಹೊಮ್ಮಿದ್ದಾರೆ ಎಂದು 'ವನ್ಇಂಡಿಯಾ' ವರದಿ ಮಾಡಿದೆ.
ಮೂಲಗಳ ಪ್ರಕಾರ ಡ್ರಾಮಾ ಜ್ಯೂನಿಯರ್ಸ್ ವಿನ್ನರ್ ಪಟ್ಟವು ಇಬ್ಬರು ಪುಟಾಣಿಗಳ ಪಾಲಾಗಿದೆ. ಶೋನಲ್ಲಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಮಂಗಳೂರಿನ ಪುಟ್ಟ ಕುವರಿ ಚಿತ್ರಾಲಿ ಡ್ರಾಮಾ ಜ್ಯೂನಿಯರ್ಸ್‌ನ ವಿನ್ನರ್ ಆಗಿದ್ದು, ಗದಗ ಜಿಲ್ಲೆಯ ಪುಟ್ಟರಾಜು ಹೂಗಾರ್ ಕೂಡಾ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇಬ್ಬರೂ ತಲಾ 4 ಲಕ್ಷ ರೂ. ಮೊತ್ತವನ್ನು ಪಡೆದಿದ್ದಾರೆ ಎನ್ನಲಾಗಿದೆ. ಮೊದಲ ರನ್ನರ್ ಅಪ್ ಆಗಿ ಮೈಸೂರಿನ ಹುಡುಗ ಮಹೇಂದ್ರ ಪ್ರಸಾದ್ ಹೊರಹೊಮ್ಮಿದ್ದು, ಎರಡು ಲಕ್ಷ ರೂ.ಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ತೃತೀಯ ಸ್ಥಾನವನ್ನು ಬಾಲಕಿ ಅಮೋಘ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಡ್ರಾಮಾ ಜೂನಿಯರ್ಸ್‌ನ ಪ್ರತಿಭೆಗಳಾದ ಅಚಿಂತ್ಯ, ತುಷಾರ್, ರೇವತಿ, ತೇಜಸ್ವಿನಿಗೆ ಸ್ಪೆಷಲ್ ಅವಾರ್ಡ್‌ಗಳನ್ನು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ ಮುಂದಿನ ಶನಿವಾರ ಮತ್ತು ರವಿವಾರ ಡ್ರಾಮಾ ಜೂನಿಯರ್ಸ್‌ನ ಫೈನಲ್ ಎಪಿಸೋಡ್‌ಗಳು ಪ್ರಸಾರವಾಗಲಿವೆ.