ರಾಜ್ಯದ ಪೊಲೀಸ್ ಸಿಬ್ಬಂದಿಗೆ ಸಿಹಿಸುದ್ದಿ
ಬೆಂಗಳೂರು, ಸೆ. 26: ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿ ವೇತನವನ್ನು ಶೇ.30ರಿಂದ 35ರಷ್ಟು ಹೆಚ್ಚಳ ಮಾಡುವಂತೆ ಸರಕಾರ ನೇಮಿಸಿದ್ದ ‘ಪೊಲೀಸ್ ವೇತನ ಪರಿಷ್ಕರಣಾ ಸಮಿತಿ’ ಶಿಫಾರಸ್ಸು ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿದ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಿತಿಯು ಪಂಜಾಬ್, ಕೇರಳ, ರಾಜಸ್ತಾನ, ಆಂಧ್ರ, ತೆಲಂಗಾಣ, ಹೊಸದಿಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹತ್ತು ರಾಜ್ಯಗಳಲ್ಲಿನ ಪೊಲೀಸ್ ಸಿಬ್ಬಂದಿ ವೇತನ ಮತ್ತು ಭತ್ತೆ ಬಗ್ಗೆ ಅಧ್ಯಯನ ನಡೆಸಿದೆ.
ಆ ಪೈಕಿ ಪಂಜಾಬ್ ಮೊದಲೆ ಸ್ಥಾನದಲ್ಲಿದ್ದು, ಕರ್ನಾಟಕ ಎಂಟನೆ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಕೊನೆಯ ಸ್ಥಾನದಲ್ಲಿದೆ. ಸಮಿತಿಯು ಶೇ.30ರಿಂದ 35ರಷ್ಟು ಅಂದರೆ ಮಾಸಿಕ 6500 ರೂ.ನಿಂದ 8,500 ರೂ.ಗಳಷ್ಟು ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯ ಪೊಲೀಸ್ ಕಾನ್‌ಸ್ಟೆಬಲ್‌ಗಳು ಪ್ರಸ್ತುತ ಭತ್ತೆ ಹೊರತುಪಡಿಸಿ, ಮೂಲ ವೇತನ 11,600 ರೂ.ಗಳನ್ನು ಪಡೆಯುತ್ತಿದ್ದು ಅವರಿಗೆ ಇದೀಗ 18,600 ರೂ.ಗಳಿಗೆ ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಿದೆ. ಅಲ್ಲದೆ, ಸುಮಾರು 4100 ರೂ.ಗಳಷ್ಟು ಭತ್ತೆ ದೊರೆಯಲಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ಗಳಿಗೆ ಹೆಡ್ ಕಾನ್‌ಸ್ಟೆಬಲ್‌ಗಳ ವೇತನ ಮತ್ತು ಭತ್ತೆ, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಅದರ ಮೇಲಿನ ಅಧಿಕಾರಿಗಳ ಸಹಕಾಯ ಸಬ್ ಇನ್ಸ್‌ಪೆಕ್ಟರ್ ವೇತನ ನೀಡುವಂತೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ಕೆಎಸ್‌ಪಿಎಸ್‌ನಿಂದ ಪೊಲೀಸ್ ವರಿಷ್ಟಾಧಿಕಾರಿ(ಎಸ್ಪಿ)ಗೆ ಭಡ್ತಿ ಪಡೆದಿರುವವರಿಗೆ ಪ್ರಸ್ತುತ ಮೂಲ ವೇತನ 36,300 ರೂ.ಗಳಿದ್ದು, ಅವರು ಒಟ್ಟು 60,608 ರೂ.ಗಳನ್ನು ಪಡೆಯುತ್ತಿದ್ದಾರೆ. ಇದೀಗ ಅವರ ಮೂಲ ವೇತನ 40,050 ರೂ.ಗಳಿಗೆ ಹೆಚ್ಚಳ ಮಾಡಿದರೆ 66,483 ರೂ.ಗಳಷ್ಟು ದೊರೆಯಲಿದೆ ಎಂದು ಅವರು ತಿಳಿಸಿದರು.
ಸಮವಸ್ತ್ರ ಭತ್ತೆ 500 ರೂ., ದೇಹದಾರ್ಢ್ಯತೆ ಕಾಪಾಡಿಕೊಳ್ಳಲು ಮಾಸಿಕ 500 ರೂ.ಗಳು ಹಾಗೂ ನಿರಂತರ ಕರ್ತವ್ಯಕ್ಕೆ 2,500 ರೂ.ಗಳು ಸೇರಿದಂತೆ ಇನ್ನಿತರ ಭತ್ತೆಗಳನ್ನು ಹೆಚ್ಚಳ ಮಾಡಲು ಸಮಿತಿ ಶಿಫಾರಸ್ಸು ಮಾಡಿದೆ. ಪೊಲೀಸ್ ಸಿಬ್ಬಂದಿಯ ಬಹುದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಅಧ್ಯಯನ ನಡೆಸಿ ವರದಿಯನ್ನು ಪಡೆದಿದೆ ಎಂದರು.
875 ಕೋಟಿ ರೂ.ಹೊರೆ: ಪೊಲೀಸ್ ಸಿಬ್ಬಂದಿ ವೇತನ ಮತ್ತು ಭತ್ತೆ ಹೆಚ್ಚಳಕ್ಕೆ ರಾಜ್ಯ ಸರಕಾರಕ್ಕೆ ವಾರ್ಷಿಕ 875 ಕೋಟಿ ರೂ.ಗಳಷ್ಟು ಹೊರೆ ಬೀಳಲಿದ್ದು, ಪ್ರಸಕ್ತ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಸುಮಾರು 600 ಕೋಟಿ ರೂ.ಗಳನ್ನು ಹೊರೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ಉದ್ಯೋಗ ಬಿಡುವವರು ಶೇ.40: ಪೊಲೀಸ್ ಇಲಾಖೆಗೆ ಸೇರಿದ ಬಳಿಕ ಶೇ.40ರಷ್ಟು ಮಂದಿ ವೇತನ ಕಡಿಮೆ ಎಂಬುದು ಸೇರಿದಂತೆ ಇನ್ನಿತರ ಕಾರಣಗಳಿಗೆ ಉದ್ಯೋಗ ತ್ಯಜಿಸುತ್ತಿದ್ದಾರೆ. ಈ ಬಗ್ಗೆ ಸಮಿತಿ ಅಧ್ಯಯನ ನಡೆಸಿದ್ದು, ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆ ಕರ್ತವ್ಯಕ್ಕಿಂತಲೂ ಬೇರೆ ಇಲಾಖೆ ಸೂಕ್ತ, ಕೆಲಸದ ಒತ್ತಡ, ಕಡಿಮೆ ವೇತನದ ಕಾರಣಕ್ಕೆ ಸಿಬ್ಬಂದಿ ಇಲಾಖೆ ತ್ಯಜಿಸುತ್ತಿದ್ದಾರೆ. 2004ರಲ್ಲಿ ಶೇ.2.33, 2010-ಶೇ.3, 2012-ಶೇ.27, 2015-ಶೇ.39ರಷ್ಟು ಮಂದಿ ಇಲಾಖೆ ಉದ್ಯೋಗ ತ್ಯಜಿಸುತ್ತಿದ್ದು, ಒಂದು ಸಾವಿರ ಮಂದಿ ಪೊಲೀಸ್ ಇಲಾಖೆಗೆ ನೇಮಕವಾದರೆ 400 ಮಂದಿ ಉದ್ಯೋಗ ತ್ಯಜಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಶೀಲಿಸಿ ಕ್ರಮ: ಮಹಾದಾಯಿ ನದಿ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಸಂಬಂಧ ಹಿರಿಯ ಅಧಿಕಾರಿ ಕಮಲ್ ಪಂತ್ ನೇತೃತ್ವದ ತಂಡ ವರದಿ ನೀಡಿದ್ದು, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರ್ಡರ್ಲಿ ರದ್ದು: ಸಶಸ್ತ್ರ ತರಬೇತಿ ಪಡೆದು ಇಲಾಖೆ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಕಸ ಗುಡಿಸುವ, ಪಾತ್ರೆ ತೊಳೆಯುವುದು ಸೇರಿದಂತೆ ‘ಆರ್ಡರ್ಲಿ’ ಪದ್ದತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬದಲಿಗೆ ಸಹಾಯಕರ ಹುದ್ದೆ ಸೃಷ್ಟಿಸಿದ್ದು, ಆ ನೇಮಕಾತಿ ಬಳಿಕ ಆರ್ಡರ್ಲಿ ಪದ್ದತಿಯನ್ನು ತೆಗೆದುಹಾಕಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್, ಸಮಿತಿ ಅಧ್ಯಕ್ಷ, ಎಡಿಜಿಪಿ ರಾಘವೇಂದ್ರ ಔರಾದ್ಕರ್, ಹಿರಿಯ ಅಧಿಕಾರಿಗಳಾದ ಕಮಲ್ ಪಂತ್, ಪ್ರತಾಪ್ ರೆಡ್ಡಿ, ಹೇಮಂತ್ ನಿಂಬಾಳ್ಕರ್, ಉಮೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಯೊಂದಿಗೆ ಚರ್ಚೆ..
‘ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳ ಸಂಬಂಧ ಸಮಿತಿ ಶಿಫಾರಸ್ಸುಗಳನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಮಾಲೋಚನೆ ನಡೆಸಿ, ಸರಕಾರದ ಆರ್ಥಿಕ ಸ್ಥಿತಿಯನ್ನು ಆಧರಿಸಿ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು’
-ಡಾ.ಜಿ.ಪರಮೇಶ್ವರ್ ಗೃಹ ಸಚಿವ