ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಮುಂಜಾಗೃತೆ ವಹಿಸಿ: ಶಾಸಕ ಶ್ರೀನಿವಾಸ್
ತರೀಕೆರೆ, ಸೆ.26: ತಾಲೂಕಿನಲ್ಲಿ ಮುಂದಿನ ಬೇಸಿಗೆಯಲ್ಲಿ ಮಳೆಯ ಅಭಾವದಿಂದ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಿಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚಿಸಿದರು.
ಅವರು ಸೋಮವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೋರ್‌ವೆಲ್‌ನಲ್ಲಿ ನೀರು ಇಲ್ಲದಿದ್ದರೂ ಕೂಡ ಪೈಪ್‌ಲೈನ್ ಅಳವಡಿಕೆ ಹಾಗೂ ಮೋಟಾರ್ ಅಳವಡಿಸುವ ಬೋಗಸ್ ಕೆಲಸ ನಡೆಯುತ್ತಿದ್ದು ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ. ಇಂತಹ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮಕೈಗೊಳ್ಳಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು
ಜಿಪಂ ಕಾರ್ಯ ನಿರ್ವಾಹಣಾಧಿಕಾರಿ ರಾಗಪ್ರಿಯ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು ಕುಡಿಯುವ ನೀರು ಪೂರೈಸಿ. ಕುಡಿಯುವ ನೀರಿನ ಮುಂದುವರಿದ ಕಾಮಗಾರಿಗಳನ್ನು ಸಕಾಲದಲ್ಲಿ ನಿರ್ವಹಿಸದಿದ್ದರೆ ಅಂತಹ ಗುತ್ತಿಗೆ ರದ್ದುಪಡಿಸಿ. 14 ನೆ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಿ ಎಂದರು.
ಅಜ್ಜಂಪುರ ತಾಪಂ ಸದಸ್ಯ ಕೃಷ್ಣಪ್ಪ ಮಾತನಾಡಿ, ಅಜ್ಜಂಪುರ ಪಟ್ಟಣದಲ್ಲಿ 3ವರ್ಷಗಳ ಹಿಂದೆ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಜಿಪಂ ಸದಸ್ಯ ಕೆ.ಎಚ್.ಮಹೇಂದ್ರ ಮಾತನಾಡಿ, ಭದ್ರಾ ಜಲಾಶಯದ ಸಮೀಪವಿದ್ದರೂ ಕಸಬಾ ಹೋಬಳಿಯ ಜನತೆಗೆ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ, ಜಿಪಂ ಅಧ್ಯಕ್ಷೆ ಚೈತ್ರಾಶ್ರೀ, ಸದಸ್ಯರಾದ ಕೆ.ಆರ್.ಆನಂದಪ್ಪ, ಶಶಿಕಲಾ, ಅನಸೂಯ, ರಾಧಾ, ತಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರಪ್ಪ, ಉಪವಿಭಾಗಾಧಿಕಾರಿ ಸರೋಜಾ, ತಹಶೀಲ್ದಾರ್ ಮಂಜೇಗೌಡ, ಅಧಿಕಾರಿಗಳಾದ ವಿಠಲ್, ಇಒ ಗಂಗಾಧರಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.