×
Ad

ಉದ್ಯಮಶೀಲತೆಯಿಂದ ಆರ್ಥಿಕ ಸಬಲತೆ: ಸಿ.ಜಗನ್ನಾಥ್

Update: 2016-09-26 22:07 IST

ಮಡಿಕೇರಿ, ಸೆ.26: ಉದ್ಯಮಶೀಲತೆಯಿಂದ ಆರ್ಥಿಕ ಸಬಲತೆಯನ್ನು ಸಾಧಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಯುವ ಸಮೂಹಕ್ಕೆ ಕರೆ ನೀಡಿದ್ದಾರೆ. 

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ನಡೆದ ಉದ್ಯಮಶೀಲತಾ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಸರಕಾರದ ಆರ್ಥಿಕ ನೀತಿಯ ಉದಾರೀಕರಣ ಹಾಗೂ ಅಧಿಕಾರದ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸ್ಥಾಪನೆಗೆ ಸರಕಾರವು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಇದರ ಬಗ್ಗೆ ತಿಳಿದುಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್ ಹೇಳಿದರು.

ಯಾವುದೇ ಉದ್ಯಮ ಅಥವಾ ಕೈಗಾರಿಕೆ ಸ್ಥಾಪನೆ ಮಾಡುವ ಮೊದಲು ಸೂಕ್ತ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆ ಅಥವಾ ಸಂಸ್ಥೆಗಳ ಮುಖಾಂತರ ಪಡೆಯುವಂತೆ ಆಗಬೇಕು. ಉದ್ಯಮ ಕ್ಷೇತ್ರದ ಬಗ್ಗೆ ತಿಳಿಯಲು ತರಬೇತಿಗಳಲ್ಲಿ ಭಾಗವಹಿಸಬೇಕು. ಹಾಗೆಯೇ ಕೈಗಾರಿಕಾ ನೀತಿ ಅನ್ವಯ ರಿಯಾಯಿತಿ ಮತ್ತು ಪ್ರೋತ್ಸಾಹವನ್ನು ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ನಾಣಯ್ಯ ಮಾತನಾಡಿ, ಉದ್ಯಮ ಘಟಕಗಳನ್ನು ಹೆಚ್ಚು ಸ್ಥಾಪನೆ ಮಾಡುವ ಮೂಲಕ ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿ ಮಾಡಬಹುದಾಗಿದೆ. ಈ ದಿಸೆಯಲ್ಲಿ ಉದ್ಯಮಶೀಲರಾಗಿ ಮುಂದುವರಿಯಲು ಹಾಗೂ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ನಬಾರ್ಡ್ ಹಾಗೂ ಬ್ಯಾಂಕುಗಳಿಂದ ಉದ್ಯಮಗಳ ಸ್ಥಾಪನೆಗೆ ಹಣಕಾಸು ನೆರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಎ. ಶಬ್ಬೀರ್ ಬಾಷ ಮಾತನಾಡಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಹಾಯಧನ, ಸೂಕ್ಷ್ಮ ಘಟಕಗಳಿಗೆ ಬಡ್ಡಿ ಸಹಾಯಧನ, ವಿದ್ಯುತ್ ತೆರಿಗೆ ವಿನಾಯಿತಿ, ತಾಂತ್ರಿಕ ಉನ್ನತೀಕರಣ ಹಾಗೂ ಗುಣಮಟ್ಟ ದೃಢೀಕರಣ ಪಡೆದ ಹೈನುಗಾರಿಕೆಗಳಿಗೆ ಸಹಾಯಧನ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು. ಮೈಸೂರು ಇಡಿಪಿ ತರಬೆೇತುದಾರ ಪ್ರದ್ಯುಮ್ನ ಮಾತನಾಡಿದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತುದಾರ ಸೂರ್ಯ ನಾರಾಯಣ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೇವಯ್ಯ, ನಗರದ ಕೈಗಾರಿಕಾ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News