ಕಾರ್ಖಾನೆಯಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಮಣೆ: ಆರೋಪ
ಶಿವಮೊಗ್ಗ, ಸೆ. 26: ನಗರದ ಹಳೇ ಮಂಡ್ಲಿಯಲ್ಲಿರುವ ಪೇಪರ್ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಏಕಾಏಕಿ ಸ್ಥಳೀಯ ಕಾರ್ಮಿಕರನ್ನು ತೆಗೆದುಹಾಕಿ, ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ ಪೀಸ್ ಆರ್ಗನೈಝೇಷನ್ ಆರೋಪಿಸಿದೆ.
ಸೋಮವಾರ ನಗರದಲ್ಲಿ ಸಂಸ್ಥೆಯ ಮುಖಂಡರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸುಮಾರು 20 ವರ್ಷಗಳಿಂದ ಈ ಕಾರ್ಖಾನೆಯಲ್ಲಿ ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 1 ತಿಂಗಳು ಕೆಲಸ ಮಾಡಿದರೂ 20 ದಿನ ಎಂದು ಸುಳ್ಳು ದಾಖಲಾತಿ ತೋರಿಸಿ ಕಾರ್ಮಿಕ ಕಾನೂನನ್ನು ಉಲ್ಲಂಘಿಸಿ ಸಂಬಳ ನೀಡಲಾಗುತ್ತಿದೆ. ಕೆಲಸವನ್ನು ಬಿಟ್ಟುಹೋಗುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿದೆ. ಕಾರ್ಖಾನೆಯನ್ನೇ ನಂಬಿಕೊಂಡ ಕೆಲಸಗಾರರು ಬೀದಿಗೆ ಬೀಳುವಂತಾಗಿದೆ. ಇದೀಗ ಏಕಾಏಕಿ ಸ್ಥಳೀಯ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿ ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾರ್ಮಿಕ ಕಾಯ್ದೆ ಪ್ರಕಾರ 3 ವರ್ಷ ಮೇಲ್ಪಟ್ಟು ಕೆಲಸ ಮಾಡುವ ಕಾರ್ಮಿಕರನ್ನು ಖಾಯಂ ಎಂದು ನಿಗದಿ ಮಾಡಿ ಅವರಿಗೆ ಎಲ್ಲಾ ಸವಲತ್ತುಗಳನ್ನು ನೀಡಬೇಕು. ಇದನ್ನು ಕೇಳಿದ್ದಕ್ಕೆ ಹೊರ ರಾಜ್ಯದ ನೌಕರರನ್ನು ತಂದು ಸೇರಿಸಿಕೊಂಡು ಕೆಲಸ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಕಾರ್ಖಾನೆಯು ತಕ್ಷಣವೆ ತನ್ನ ವರ್ತನೆಯನ್ನು ಸರಿಪಡಿಕೊಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕುಟುಂಬ ವರ್ಗದವರೊಂದಿಗೆ ಕಾರ್ಖಾನೆ ಎದುರು ಹೋರಾಟ ನಡೆಸಲಾಗುತ್ತದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಮಹಾಬಲರಾವ್, ಸಮೀವುಲ್ಲಾ, ಸೈಯದ್ ಸೈಫುಲ್ಲಾ, ಕಿಫಾಯತ್ ವುಲ್ಲಾ ಶರೀಫ್‌ಮತ್ತಿತರರು ಉಪಸ್ಥಿತರಿದ್ದರು.