ಶಿವಮೊಗ್ಗದಲ್ಲಿ ‘ಅನೈತಿಕ ಪೊಲೀಸ್‌ಗಿರಿ’

Update: 2016-09-26 16:50 GMT

ಶಿವಮೊಗ್ಗ, ಸೆ. 26: ಅನ್ಯಧರ್ಮೀಯ ಯುವತಿ ಯೊಂದಿಗೆ ಮಾತನಾಡುತ್ತಿದ್ದ ಎಂದು ಆರೋಪಿಸಿ ಯುವಕನೋರ್ವನಿಗೆ ಗುಂಪೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ನಗರದಲ್ಲಿ ಸೋಮ ವಾರ ನಡೆದಿದೆ.

15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿ ಯಾಗಿರುವ ಎಲ್ಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಹಲ್ಲೆಗೊಳಗಾದ ಯುವಕ ಶಿವಮೊಗ್ಗ ನಗರದವನೆಂದು ತಿಳಿದು ಬಂದಿದ್ದು, ಯುವತಿ ತರೀಕೆರೆ ತಾಲೂಕಿನವಳು ಎಂದು ಹೇಳಲಾಗಿದೆ.

ಘಟನೆ ಹಿನ್ನೆಲೆ: ಹಲ್ಲೆಗೊಳಗಾದ ಯುವಕ ಹಾಗೂ ಅನ್ಯಧರ್ಮೀಯ ಯುವತಿ ಈ ಹಿಂದೆ ಒಂದೇ ಕಾಲೇಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಸ್ನೇಹಿತರಾಗಿದ್ದರು ಎನ್ನಲಾಗಿದೆ. ಸಹ್ಯಾದ್ರಿ ಕಾಲೇಜ್ ಸಮೀಪದ ಎಂಆರ್‌ಎಸ್ ವೃತ್ತದ ಬಳಿಯ ರಸ್ತೆಯಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಗುಂಪೊಂದು ಯುವಕನನ್ನು ಊರುಗಡೂರು ಬಳಿ ಕರೆದೊಯ್ದು ಯುವತಿಯ ಜೊತೆ ಮಾತನಾಡುತ್ತಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಹಿಂದಿರುಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಯುವಕ ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದ್ದು, ಈ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಲು ನಿರಾಕರಿಸಿದೆ.

 ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಇಂತಹ ಕಿಡಿಗೇಡಿಗಳ ಉಪಟಳಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕುವ ಜೊತೆಗೆ ಯಾವುದೇ ಒತ್ತಡಕ್ಕೆ ಮಣಿಯದೆ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News