ಕೋಟ್ಯಂತರ ರೂ. ವೆಚ್ಚ ದ ತುಂಗಾ ನಾಲೆ ಕಳಪೆ ಕಾಮಗಾರಿ

Update: 2016-09-26 16:51 GMT

 ಶಿವಮೊಗ್ಗ, ಸೆ. 26: ಕೋಟ್ಯಂತರ ರೂ. ವೆಚ್ಚದ ತುಂಗಾ ನಾಲೆ ಆಧುನೀಕರಣ ಕಾಮಗಾರಿಯು ಕಳಪೆಯಾಗಿದೆ ಎಂಬ ಆರೋಪ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಅಂತಿಮ

ವಾಗಿ ತುಂಗಾ ಎಡದಂಡೆ ಕಾಲುವೆ ದುರಸ್ತಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಜಿಪಂ ಸದನ ಸಮಿತಿಯ ಮೂಲಕ ನಡೆಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ, ಸಂಬಂಧಿತ ಇಲಾಖೆಯಿಂದ ಕಾಮಗಾರಿಯ ಗುಣಮಟ್ಟ ವರದಿ ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಜಿಪಂ ಪ್ರತಿಪಕ್ಷ ನಾಯಕ ಆರ್.ಸಿ. ಮಂಜುನಾಥ್, ತುಂಗಾನಾಲೆ ಆಧುನೀಕರಣ ಕಾಮಗಾರಿಗೆ ಖರ್ಚಾಗಿರುವ ಹಣದ, ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸದಿರುವವ ಬಗ್ಗೆ ಮತ್ತು ಕಳಪೆ ಎಂದು ತಿಳಿದಿದ್ದರೂ ಹಣ ಬಿಡುಗಡೆ ಮಾಡಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೆ.ಇ. ಕಾಂತೇಶ್, ಈ ಕಾಮಗಾರಿ ಶೇ. 100 ರಷ್ಟು ಕಳಪೆಯಾಗಿದೆ. ಟೆಂಡರ್‌ಗಿಂತಲೂ ಮುಂಚಿತವಾಗಿ ಕಾಮಗಾರಿ ಆರಂಭವಾಗಿದೆ. ಕರಾರುಪತ್ರ ಮಾಡಿಕೊಳ್ಳುವ ಮೊದಲೇ ಕೆಲಸ ಆರಂಭಿಸಲಾಗಿದೆ. ಶೇ. 10 ರಷ್ಟು ಹಣವನ್ನು ಕಾಮಗಾರಿಗೂ ಮುಂಚಿತವಾಗಿ ಗುತ್ತಿಗೆದಾರರಿಗೆ ನೀಡಲಾಗಿತ್ತು ಎಂದು ಆರೋಪಿಸಿದರು. ಗುತ್ತಿಗೆ ಪಡೆದಿದ್ದ ಕಂಪೆನಿ ಬೇರೆ ಕಂಪೆನಿಗಳಿಗೆ ಉಪಗುತ್ತಿಗೆ ನೀಡಿೆ. ಇದು ಒಪ್ಪಂದದ ನಿಯಮಕ್ಕೆ ವಿರುದ್ಧವಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.

 ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕಳಪೆ ಕಾಮಗಾರಿ ಕಂಡು ಬಂದಿದ್ದ ಕಾರಣ ಗುತ್ತಿಗೆದಾರರಿಗೆ ಹಣ ಪಾವತಿಸ ಬಾರದೆಂದು ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆಯಲಾಗಿತ್ತು. ಆದರೂ ಹಣ ಪಾವತಿಸಲಾಗಿದೆ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಬೆಲೆ ನೀಡುತ್ತಿಲ್ಲ.  ಶಾಸಕರು ಬರೆದ ಪತ್ರಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ದುರ್ವತನೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಜಿಪಂ ಸಿಇಒ ರಾಕೇಶ್‌ಕುಮಾರ್ ಮಾತನಾಡಿ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ವಹಿಸಿದ್ದರು. ಉಪಾಧ್ಯಕ್ಷೆ ವೇದಾ ವಿಜಯಕುವಾರ್, ಸಿಇಒ ಕೆ. ರಾಕೇಶ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News