ಹನೂರು, ಶಿವಪ್ರಕಾಶ್, ಹನುಮಂತಯ್ಯ, ನೇಮಿಚಂದ್ರ, ನಾಗವೇಣಿಗೆ ಸಾಹಿತ್ಯ ಅಕಾಡಮಿ ಗೌರವ

Update: 2016-09-26 18:19 GMT

ನಗದು ಮೊತ್ತ ಐದುಪಟ್ಟು ಹೆಚ್ಚಳ; ಅ.25ಕ್ಕೆ ಚಿತ್ರದುರ್ಗದಲ್ಲಿ ಪ್ರದಾನ

ಬೆಂಗಳೂರು, ಸೆ.26: ಕರ್ನಾಟಕ ಸಾಹಿತ್ಯ ಅಕಾಡಮಿಯ 2015ನೆ ವರ್ಷದ ಗೌರವ ಪ್ರಶಸ್ತಿ ಮತ್ತು 2014ನೆ ವರ್ಷದ ಪುಸ್ತಕ ಬಹುಮಾನದ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯ ಮತ್ತು ಬಹುಮಾನಗಳ ನಗದು ಮೊತ್ತವನ್ನು ಐದು ಪಟ್ಟು ಹೆಚ್ಚಿಸಲಾಗಿದೆ.ಸೋಮವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, 2015ನೆ ವರ್ಷದ ಗೌರವ ಪ್ರಶಸ್ತಿಗೆ ಸಾಹಿತಿಗಳಾದ ಡಾ.ಕೃಷ್ಣಮೂರ್ತಿ ಹನೂರು, ಡಾ.ಎಚ್.ಎಸ್.ಶಿವಪ್ರಕಾಶ್, ಡಾ.ಎಲ್.ಹನುಮಂತಯ್ಯ, ನೇಮಿಚಂದ್ರ, ಡಾ.ಎಚ್.ನಾಗವೇಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

 ಗೌರವ ಪ್ರಶಸ್ತಿಗೆ ಈ ಹಿಂದೆ 10 ಸಾವಿರ ರೂ. ನಗದು ಬಹುಮಾನ ಮತ್ತು ಪುಸ್ತಕ ಬಹುಮಾನಕ್ಕೆ ಐದು ಸಾವಿರ ರೂ. ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಪ್ರಶಸ್ತಿಗಳ ನಗದು ಮೊತ್ತವನ್ನು ಐದುಪಟ್ಟು ಹೆಚ್ಚಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.25,26ರಂದು ಚಿತ್ರದುರ್ಗದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

2014ನೆ ವರ್ಷದ ಪುಸ್ತಕ ಬಹುಮಾನಕ್ಕೆ ಆಯ್ಕೆಗೊಂಡ ಪುಸ್ತಕಗಳ ವಿವರ: ಲೇಖಕ ಕೆ.ಪಿ ಮೃತ್ಯುಂಜಯ ರಚಿಸಿರುವ ‘ನನ್ನ ಶಬ್ದ ನಿನ್ನಲಿ ಬಂದು’( ಕಾವ್ಯ), ಶ್ರೀಧರ ಬಳಗಾರ ರಚನೆಯ ‘ಆಡುಕಳ’(ಕಾದಂಬರಿ), ಜಯಶ್ರೀ ಕಾಸರವಳ್ಳಿಯವರ ‘ದಿನಚರಿ ಕಡೇ ಪುಟದಿಂದ’(ಸಣ್ಣಕತೆ), ಎಂ.ಬೈರೇಗೌಡರ ‘ದೇವನಾಂಪ್ರಿಯ ಅಶೋಕ’(ನಾಟಕ), ಎಂ.ಎಸ್.ಶ್ರೀರಾಮ್‌ರ ‘ಅರ್ಥಾರ್ಥ’( ಲಲಿತ ಪ್ರಬಂಧ), ವೆಂಕಟೇಶ ಮಾಚಕನೂರ ಅವರ ‘ಅಪೂರ್ವ ಪೂರ್ವ’ (ಪ್ರವಾಸ ಸಾಹಿತ್ಯ), ಜಿ.ಬಿ.ಹರೀಶ್ ರಚನೆಯ ‘ಆನಂದ ಕುಮಾರಸ್ವಾಮಿ’(ಜೀವನಚರಿತ್ರೆ).

ರವಿಕುಮಾರ್ ನೀಹಾ ರಚನೆಯ ಬಯಲ ಬನಿ(ಸಾಹಿತ್ಯ ವಿಮರ್ಶೆ), ಟಿ.ಎನ್.ನಾಗರತ್ನರ ಶ್ರೀ ಕನಕದಾಸರ ಕೀರ್ತನೆಗಳು(ಗ್ರಂಥ ಸಂಪಾದನೆ), ಎ.ಕೆ.ರಾಮೇಶ್ವರ ಅವರ ಬೆಳಗುತಿರುವ ಭಾರತ(ಮಕ್ಕಳ ಸಾಹಿತ್ಯ), ಅಗ್ನಿಶ್ರೀಧರ ರಚನೆಯ ಕ್ವಾಂಟಂ ಜಗತ್ತು(ವಿಜ್ಞಾನ ಸಾಹಿತ್ಯ), ಎಂ.ಅಬ್ದುಲ್ ರೆಹ್ಮಾನ್ ಪಾಷ ವಿರಚಿತ ನಂಬಿಕೆ, ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ(ಮಾನವಿಕ).

 ವೀರೇಶ ಬಡಿಗೇರ ರಚನೆಯ ಹಸ್ತಪ್ರತಿ ಸಂಕಥನ(ಸಂಶೋಧನೆ), ಲೇಖಕಿ ಬಿ.ಎಸ್.ಕರುಣಾ ರಚಿತ ಗಾಳಿಪಳಗಿಸಿದ ಬಾಲಕ(ಅನುವಾದ- ಸೃಜನಶೀಲ), ಆರ್.ಕೆ.ಹುಡಗಿ ಅವರ ಕಾರ್ಪೊರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ( ಅನುವಾದ -ಸೃಜನೇತರ), ಪತ್ರಕರ್ತ ಜಿ.ಎನ್.ಮೋಹನ್ ರಚನೆಯ ಕಾಫಿಕಪ್ಪಿನೊಳಗೆ ಕೊಲಂಬಸ್ (ಸಂಕೀರ್ಣ) ಮತ್ತು ಲೇಖಕಿ ಆಶಾ ರಘು ವಿರಚಿತ ಆವರ್ತ (ಕಾದಂಬರಿ) ಆಯ್ಕೆ ಮಾಡಲಾಗಿದೆ.

   2014ನೆ ವರ್ಷದ ದತ್ತಿನಿಧಿ ಬಹುಮಾನಕ್ಕೆ ಆಯ್ಕೆ ಆದವರ ವಿವರ: ಚದುರಂಗ ದತ್ತಿನಿಧಿ ಬಹುಮಾನ-ಲೇಖಕ ವೈ.ಎಸ್. ಹರಗಿ ರಚನೆಯ ಉರಿವ ಜಲ (ಕಾದಂಬರಿ), ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ-ಎನ್.ಜಗದೀಶ್ ಕೊಪ್ಪ ಅವರ ಬಿಳಿ ಸಾಹೇಬನ ಭಾರತ ಜಿಮ್ ಕಾರ್ಬೆಟ್ ಜೀವನಗಾಥೆ(ಜೀವನ ಚರಿತ್ರೆ), ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ- ರಾಮಲಿಂಗಪ್ಪ ಟಿ.ಬೇಗೂರು ರಚಿತ ಮಹಿಳೆ ಚರಿತ್ರೆ -ಪುರಾಣ( ಸಾಹಿತ್ಯ ವಿಮರ್ಶೆ), ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ- ಬಸು ಬೇವಿನ ಗಿಡ ರಚನೆಯ ಸಮಕಾಲೀನ ಭಾರತೀಯ ಸಣ್ಣಕತೆಗಳು(ಅನುವಾದ), ಮಧುರಚೆನ್ನ ದತ್ತಿನಿಧಿ ಬಹುಮಾನ- ಪದ್ಮನಾಭ ಭಟ್‌ರ ಕೇಪಿನ ಡಬ್ಬಿ (ಲೇಖಕರ ಮೊದಲ ಸ್ವತಂತ್ರ ಕೃತಿ), ಅಮೆರಿಕನ್ನಡ ದತ್ತಿನಿಧಿ ಬಹುಮಾನ ಡಾ.ಎಚ್.ಎಸ್.ಎಂ.ಪ್ರಕಾಶ್ ರಚನೆಯ ಹಿಸ್ಟರಿ ಆಫ್ ದಲಿತ್ ಮೂವ್‌ಮೆಂಟ್ (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News