ಅಡಿಕೆಗೇಕೆ ಕ್ಯಾನ್ಸರ್ ಕಳಂಕ?

Update: 2016-09-27 05:25 GMT

ಒಂದು ಕಾಲದಲ್ಲಿ ಅಡಿಕೆ ಮಲೆನಾಡಿಗೆ ಸೀಮಿತವಾದ ಬೆಳೆಯಾಗಿತ್ತು. 1990ರಲ್ಲಿ ಅಡಿಕೆಯ ಬೆಲೆ ಹೆಚ್ಚಾಗತೊಡಗಿದ್ದರಿಂದ ಇದರ ವ್ಯಾಪ್ತಿ ಹೆಚ್ಚಾಗುತ್ತಾ ಬಯಲುಸೀಮೆಗೂ ವ್ಯಾಪಿಸಿತು. ಇದರ ಬೆಲೆ ಒಂದೊಮ್ಮೆ ಒಂದು ಕ್ವಿಂಟಾಲ್‌ಗೆ ಒಂದು ಲಕ್ಷದವರೆಗೆ ಹೋಗಿದ್ದು ನೆನಪಿರಬಹುದು. ಅಡಿಕೆಯ ಮೇಲಿನ ಆರ್ಥಿಕತೆಯ ಮೇಲೆ ಇಡೀ ಮಲೆನಾಡಿನ ಎಲ್ಲಾ ವಹಿವಾಟುಗಳು ನಿಂತಿವೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಅಡಿಕೆಗೆ ಬಂದ ‘ಕ್ಯಾನ್ಸರ್ ಕಳಂಕ’ ಅಡಿಕೆ ಬೆಳೆಗಾರರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸದೆ ಇದ್ದೀತೆ?

ಅಡಿಕೆಯ ಬೆಳೆ ಭಾರತ, ಚೀನಾ, ಇಂಡೋನೇಷ್ಯಾ ಪಾಶ್ಚಿಮಾತ್ಯ ದೇಶದಲ್ಲಿ ಮೆಕ್ಸಿಕೋ ಬಹುಶಃ ಉಷ್ಣ ವಲಯದ ಭಾಗಗಳಲ್ಲಿ ಅಡಿಕೆ ಬೆಳೆಯುತ್ತಿರಬಹುದು. ಭಾರತದ ಮಟ್ಟಿಗೆ ಅಸ್ಸಾಂ, ಮಲೆನಾಡು, ಕೇರಳ, ದಕ್ಷಿಣ ಕನ್ನಡ ಈ ಭಾಗದಲ್ಲೆಲ್ಲಾ ಅಡಿಕೆ ಬೆಳೆಯುತ್ತಾರೆ. ಒಂದು ಕಾಲದಲ್ಲಿ ಅಡಿಕೆ ಮಲೆನಾಡಿಗೆ ಸೀಮಿತವಾದ ಬೆಳೆಯಾಗಿತ್ತು. 1990ರಲ್ಲಿ ಅಡಿಕೆಯ ಬೆಲೆ ಹೆಚ್ಚಾಗತೊಡಗಿದ್ದರಿಂದ ಇದರ ವ್ಯಾಪ್ತಿ ಹೆಚ್ಚಾಗುತ್ತಾ ಬಯಲುಸೀಮೆಗೂ ವ್ಯಾಪಿಸಿತು. ಇದರ ಬೆಲೆ ಒಂದೊಮ್ಮೆ ಒಂದು ಕ್ವಿಂಟಾಲ್‌ಗೆ ಒಂದು ಲಕ್ಷದವರೆಗೆ ಹೋಗಿದ್ದು ನೆನಪಿರಬಹುದು. ಅಡಿಕೆಯ ಮೇಲಿನ ಆರ್ಥಿಕತೆಯ ಮೇಲೆ ಇಡೀ ಮಲೆನಾಡಿನ ಎಲ್ಲಾ ವಹಿವಾಟುಗಳು ನಿಂತಿವೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಅಡಿಕೆಗೆ ಬಂದ ‘ಕ್ಯಾನ್ಸರ್ ಕಳಂಕ’ ಅಡಿಕೆ ಬೆಳೆಗಾರರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸದೆ ಇದ್ದೀತೆ? ದೇಶದಲ್ಲಿವಿಜ್ಞಾನ, ತಂತ್ರಜ್ಞಾನ ಹೆಚ್ಚಾದ ಹಾಗೆ ರೈತರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರಕಿಸಿಕೊಟ್ಟಿದ್ದರಿಂದ ನೀರಿನ ಸೌಕರ್ಯಗಳನ್ನು ಮಾಡಿಕೊಂಡು ಸಣ್ಣ ಸಣ್ಣ ರೈತರು ಕೂಡ ಒಂದು ಎಕರೆ, ಅರ್ಧ ಎಕರೆ ಅಡಿಕೆ ತೋಟಗಳನ್ನು ಮಾಡಿಕೊಂಡಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಅಭಾವದಿಂದ ಯಂತ್ರಗಳು ಬಂದು ಒಂದಿಷ್ಟು ತೊಂದರೆಯಾಗಿರಬಹುದು. ಆದರೆ, ಜೀವನ ಮಟ್ಟ ಅಡಿಕೆಯಿಂದ ಎತ್ತರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಹಠಾತ್ ಆಗಿ ಅಡಿಕೆಯ ಸೇವನೆಯೂ ಕ್ಯಾನ್ಸರ್‌ಗೆ ಕಾರಣ ಎಂಬ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ರೈತ ತನ್ನ ಮುಂದಿನ ಅಡಿಕೆಯ ಬೆಲೆಯ ವಿಚಾರದಲ್ಲಿ ಅಲ್ಲದೆ, ತನ್ನ ಜೀವನದ ವಿಚಾರದಲ್ಲಿ ಚಿಂತೆಗೊಳಗಾಗಿದ್ದಾನೆ. ಈಗಾಗಲೇ ಈ ವಿಚಾರ ಕೋರ್ಟಿಗೆ ಹೋಗಿದೆ. ತೀರ್ಪು ಬರಬೇಕಿದೆ. ಇದಕ್ಕಾಗಿ ಅಡಿಕೆ ಬೆಳೆಗಾರರ ಒಕ್ಕೂಟ ಹೋರಾಡುತ್ತಿದೆ.

ಭಾರತದ ಮಟ್ಟಿಗೆ ಅಡಿಕೆ ಯಾವ ಕಾಲದಿಂದ ಬಳಸಲ್ಪಡುತ್ತಿದೆ ಎಂಬುದಕ್ಕೆ ಆಧಾರವಿಲ್ಲ. ಇದು ಧಾರ್ಮಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು ತಾಂಬೂಲ ಎಂಬ ವಿಚಾರದಲ್ಲಿ ಆಹಾರ ಎಂಬ ವಿಚಾರದವರೆಗೆ ಬಂದಿದೆ. ಒಂದು ವೇಳೆ ವಿಷವಿದ್ದರೆ ಎಂದೋ ಇದು ನಿಷೇಧ ಆಗಿರುತ್ತಿತ್ತು. ಹಾಗೆಯೇ ಹೊರ ದೇಶಗಳಲ್ಲಿ ಅಡಿಕೆ ಬೆಳೆಯುತ್ತಾರೆ. ಅಡಿಕೆಯಲ್ಲಿ ಒಂದಿಷ್ಟು ಮತ್ತು ಬರಿಸುವ ರಾಸಾಯನಿಕಗಳಿವೆ. ಕೆಲವು ವರ್ಷಗಳ ಹಿಂದೆ ಇದರಿಂದ ವೈನ್ ತಯಾರಿಸಲು ಪ್ರಯತ್ನ ಮಾಡಿದ್ದರು. ಅಡಿಕೆ ಕೈಮಗ್ಗದ ಬಟ್ಟೆಗಳಿಗೆ ಬಣ್ಣ ಹಾಕಲು ಹೋಗುತ್ತಿತ್ತು ಎಂಬ ವಿಚಾರವಿದೆ. ಹಾಗೆಯೇ ತಮಿಳುನಾಡಿನಲ್ಲಿ ಕೇವಲ ತಿನ್ನಲು ಕರ್ನಾಟಕದಿಂದ ಅಡಿಕೆಯನ್ನು ಒಯ್ಯುತ್ತಿದ್ದರು ಎಂಬ ಸಾಕ್ಷ್ಯಗಳಿವೆ. ಬಹುಶಃ ತಮಿಳುನಾಡೇ ಕರ್ನಾಟಕದ ಅಡಿಕೆಗೆ ಮಾರುಕಟ್ಟೆಯಾಗಿತ್ತು ಎಂದು ಹೇಳಬಹುದು. ಆದರೆ, ಅಡಿಕೆಗೆ ಅತ್ಯುತ್ತಮವಾದ ಧಾರಣೆ ಬರತೊಡಗಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಉತ್ತರ ನೋಡಿಕೊಳ್ಳೋಣ.

60ರ ದಶಕದಲ್ಲಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಬೆಟ್ಟೆಗೆ 350 ರೂ. ಇತ್ತು. ಆಗ ಒಂದು ಕ್ವಿಂಟಾಲ್ ಹಸಕ್ಕೆ ತೆಳು ಅಡಿಕೆಗೆ 750 ರೂ. ಬೆಲೆ ಇತ್ತು. ಆಗ ರಾಸಾಯನಿಕಗಳಿಲ್ಲದಿದ್ದರೂ ಕೂಡ ಒಂದು ಎಕರೆಗೆ 12 ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದರು. ಹಠಾತ್ತಾಗಿ ಆಗಿ 1990ರಲ್ಲಿ ಅಡಿಕೆಯ ಧಾರಣೆ 10 ಸಾವಿರದಿಂದ 12ರವರೆಗೆ ಏರಿಬಿಟ್ಟಿತು. ಅಡಿಕೆ ಬೆಳೆಗಾರರಿಗೆ ಸ್ವರ್ಗ ಸಿಕ್ಕ ಹಾಗೆ ಆಯಿತು. ಕಾರಣ, ಪೊಟ್ಟಣಗಳ ಮೂಲಕ ಅಡಿಕೆಯ ಮಾರಾಟ. ಇದರ ಅವತಾರ ಎಲ್ಲೆಡೆ ಕಾಣಿಸತೊಡಗಿತು. ಈ ದಾರಿಯಲ್ಲಿಯೇ ಖಾಸಗಿ ಮಾರಾಟಗಾರರ ಕೈಯಿಂದ ಸರಕಾರ ತನ್ನದೇ ಆದ ಮಾರುಕಟ್ಟೆಯನ್ನು ಪ್ರಾರಂಭಿಸಿತು. ತದನಂತರ ತಾಲೂಕು ಮಟ್ಟದಲ್ಲಿ ಮಾರುಕಟ್ಟೆ ಪ್ರಾರಂಭವಾಯಿತು. ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೊ ಎಂಬ ಎರಡು ಖಾಸಗಿ ಮಾರುಕಟ್ಟೆಗಳು ರೈತನನ್ನು ಎತ್ತಿ ಹಿಡಿದವು. ಮ್ಯಾಮ್ಕೋಸ್ ಸಾಲವನ್ನು ಕೊಡಲೂ ಪ್ರಾರಂಭಿಸಿತು. ಇದರಿಂದ ಅಡಿಕೆ ರೈತ ಸ್ವಾವಲಂಬಿಯಾದ. ನನ್ನ ಪ್ರಶ್ನೆ ಇಷ್ಟೆ, ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ನಿಜವೇ ಅಥವಾ ಇದು ಅಡಿಕೆ ನಿಷೇಧಿಸಲೋಸುಗ ಬೇರೆಯವರು ಮಾಡಿದ ತಂತ್ರವೇ?

 ಹಾಗೊಮ್ಮೆ ನೋಡುವುದಾದರೆ ಇಂದಿನ ದಿನದಲ್ಲಿ ಯಾವ ಆಹಾರವೂ ಕ್ಯಾನ್ಸರ್ ಭಯದಿಂದ ಹೊರತಾಗಿಲ್ಲ. ಈಗ ಅಗಿಯುವ ಗುಟ್ಕಾದಲ್ಲೂ ಕೂಡ ಯಾವುದೋ ಮಾದಕ ವಸ್ತು ಇಲ್ಲದೆ ಅದು ಇಷ್ಟು ಪ್ರಸಿದ್ಧಿಯಾಗಲು ಸಾಧ್ಯವೆ ಇಲ್ಲ ? ಅದನ್ನು ಯಾಕೆ ಬ್ಯಾನ್ ಮಾಡಲಿಲ್ಲ? ವಿಚಿತ್ರ ಎಂದರೆ ಅಂಗಡಿ ಒಳಗಡೆ ಇಟ್ಟು ಇಂದಿಗೂ ಮಾರುತ್ತಿದ್ದಾರೆ, ಹೊರಗಡೆ ತಂದು ಮಾರಬಾರದೆನ್ನುವ ಕಾನೂನು ಮಾಡಿದ್ದಾರೆ, ಇದೆಂತಹ ವಿಚಿತ್ರ ಕಾನೂನು?. ಇಂದು ಹಾಲಿನಿಂದ ಹಿಡಿದು ಅನ್ನದವರೆಗೆ ಆಹಾರ ಶುದ್ಧವಾಗಿಲ್ಲ. ಎಲ್ಲರ ಹತ್ತಿರ ಹಣ ಇದೆ, ಹಣ ಕೊಟ್ಟು ಎಲ್ಲವನ್ನೂ ಕೊಳ್ಳುತ್ತೇನೆ ಎಂಬ ಹಪಾಹಪಿಯಲ್ಲಿ ನಾವಿರುವಾಗ ನಮಗೆ ಎಲ್ಲಾ ವಸ್ತುಗಳನ್ನು ಪೂರೈಸುವ ಮಾರಾಟಗಾರರು ತಾವೂ ಕೂಡ ಹಣ ಮಾಡಲು ಹೊರಟು ನಾವು ಕೊಡುವ ಹಣಕ್ಕೆ ತಾವು ಕೊಡುವ ವಸ್ತುಗಳನ್ನು ಆಹಾರವನ್ನು ಹೇಗೆ ಕಲಬೆರಕೆ ಮಾಡಬೇಕು ಎಂಬುದನ್ನು ಕಲಿತುಬಿಟ್ಟಿರುತ್ತಾರೆ ಎಂಬುದನ್ನು ಮರೆತು ಬಿಟ್ಟಿದ್ದೇವೆ. ಆ ಬಿಸಿ ನಮಗೀಗ ತಾಗುತ್ತಿದೆ.

ಕೇಂದ್ರ ಸರಕಾರದಲ್ಲೂ ರಾಜ್ಯ ಸರಕಾರದಲ್ಲೂ ಆಹಾರ ಖಾತೆ ಇದೆ. ಆಹಾರ ಮಂತ್ರಿಗಳಿದ್ದಾರೆ. ಪ್ರತಿಯೊಂದು ಆಹಾರದ ಬಿಡುಗಡೆ ಯಾಗುವಾಗಲೂ ಸೆನ್ಸಾರ್ ಇದೆ. ಆದರೆ, ಖ್ಯಾತ ಪತ್ರಕರ್ತರೊಬ್ಬರ ಲೇಖನದಲ್ಲಿ ಹೀಗೆ ಬರೆದಿದ್ದಾರೆ, ‘‘ನೀವು ಗೋಧಿಯನ್ನು ತೆಗೆದುಕೊಳ್ಳುವಾಗ ಮೂಸಿ ನೋಡಿ, ಅದಕ್ಕೆ ಬಿ.ಹೆಚ್.ಸಿ. ಅಥವಾ ಡಿ.ಡಿ.ಟಿ. ವಾಸನೆ ಬರದೇ ಇದ್ದರೆ ನೋಡಿ.’’ ಎಂದು.

ಹೀಗಿರುವಾಗ ಅಡಿಕೆಗೆ ಮಾತ್ರ ಈ ‘ಕ್ಯಾನ್ಸರ್’ ಎಂಬ ಅಪಖ್ಯಾತಿ ಯಾಕೆ?

Writer - ನಾಗೇಶ್ ನಾಯಕ್, ಇಂದಾವರ

contributor

Editor - ನಾಗೇಶ್ ನಾಯಕ್, ಇಂದಾವರ

contributor

Similar News