ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಮಗಳೂರು, ಸೆ.27: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನಗರದ ಹಳೆ ತಾಲೂಕು ಕಚೆೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿಳಂಬ ಗತಿಯಲ್ಲಿ ನಡೆಯುತ್ತಿರುವ ಸರ್ವೇ ಇಲಾಖೆಯ ವಿವಿಧ ಕೆಲಸಗಳನ್ನು ಸಕಾಲದಲ್ಲಿ ಪೂರೈಸಲು ಅನುವಾಗುವಂತೆ ಕ್ರಮಕೈಗೊಳ್ಳುವುದು. ಕಂದಾಯ ದಾಖಲೆಗಳ ತಿದ್ದುಪಡಿಗೆ ತಹಶೀಲ್ದಾರ್‌ಗೆ ಸಂಪೂರ್ಣ ಅಧಿಕಾರ ನೀಡುವುದು. ನಾಡಕಚೆೇರಿಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ರೈತರ ಕೆಲಸಗಳನ್ನು ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿ ಗ್ರಾಪಂ ಮಟ್ಟದಲ್ಲಿ ಫಸಲು ಪಹಣಿ ದೊರಕುವ ವ್ಯವಸ್ಥೆ ಮಾಡುವುದರೊಂದಿಗೆ ಪಹಣಿಯಲ್ಲಿ ರೈತರ ಬೆಳೆಯನ್ನು ಕಡ್ಡಾಯವಾಗಿ ನಮೂದಿಸುವುದು, ಕಂದಾಯ ನಿಗದಿಮಾಡಲು ಭೂಮಿಯನ್ನು ಎಬಿಸಿಡಿ ಎಂದು ವರ್ಗೀಕರಣ ಮಾಡಬೇಕೆಂದು ಮನ ವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವುದು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ತಾಲೂಕು ಕಚೇರಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ವಿಧಿಸುತ್ತಿರುವ ವಾಹನ ನಿಲುಗಡೆ ಶುಲ್ಕವನ್ನು ತಕ್ಷಣ ನಿಲ್ಲಿಸಬೇಕು ಒತ್ತಾಯಿಸಿದ್ದಾರೆ.
ತೆಂಗು, ಅಡಿಕೆ, ಮೆಕ್ಕೆಜೋಳ, ತೊಗರಿ, ಈರುಳ್ಳಿ, ಅಲಸಂದೆ, ಹೆಸರು, ಉದ್ದು, ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಲಾಭದಾಯಕ ಬೆಲೆ ನೀಡಿ ಸರಕಾರವೇ ಖರೀದಿಸಬೇಕು. ತರಕಾರಿಗೆ ಯಾವುದೇ ಕಾಲದಲ್ಲೂ ಕೆ.ಜಿ.ಗೆ ಕನಿಷ್ಠ 25 ರೂ.ಗಿಂತ ಕಡಿಮೆ ಇಲ್ಲದಂತೆ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್, ರಾಜ್ಯ ಸಮಿತಿಯ ಸದಸ್ಯ ಕೆ.ಕೆ.ಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಚಂದ್ರೇಗೌಡ ಸೇರಿದಂತೆ ಹಲವರು ಹಾಜರಿದ್ದರು.