×
Ad

ಪರಿಸರಕ್ಕೆ ಪೂರಕ ಪ್ರವಾಸೋದ್ಯಮ ಅಗತ್ಯ: ಎಲ್.ಚಂದ್ರಶೇಖರ ನಾಯಕ

Update: 2016-09-27 22:32 IST

ಕಾರವಾರ, ಸೆ.27: ಉತ್ತರಕನ್ನಡ ಜಿಲ್ಲೆಯ ವಾತಾವರಣ ಮತ್ತು ರಮಣೀಯ ನಿಸರ್ಗ ತಾಣಗಳು ಇತರ ಪ್ರವಾಸಿ ತಾಣಗಳಿಗಿಂತ ಭಿನ್ನವಾಗಿದ್ದು, ಇಲ್ಲಿನ ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಜಿಲ್ಲಾ ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಆರ್. ಎಂಟರ್‌ಪ್ರೈಸಸ್ ಸಹಯೋಗದೊಂದಿಗೆ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆಚರಿಸುತ್ತಿರುವುದು ಸಮಂಜಸವಾಗಿದೆ ಮತ್ತು ಕರ್ನಾಟಕದಲ್ಲಿ ಉ.ಕ. ಜಿಲ್ಲೆ ಪ್ರವಾಸೋದ್ಯಮಕ್ಕೆ ಸೂಕ್ತ ತಾಣವಾಗಿದೆ. ಜಿಲ್ಲೆಯ ಪರಿಸರವನ್ನು ನಿರ್ವಹಿಸುತ್ತಾ ಪ್ರವಾಸೋದ್ಯಮವನ್ನು ಬೆಳೆಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಎಂ.ಆರ್. ನಾಯ್ಕ ಮಾತನಾಡಿ, ನೆರೆಯ ಕೇರಳ ಮತ್ತು ಗೋವಾ ರಾಜ್ಯಗಳು ಪ್ರವಾಸೋದ್ಯಮದಲ್ಲಿ ಹೆಸರು ಮಾಡಿವೆ. ಅಲ್ಲಿರುವ ಕರಾವಳಿ ವಾತಾವರಣ ಜಿಲ್ಲೆಯಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಅದೇ ನಿಟ್ಟಿನಲ್ಲಿ ಬೆಳೆಸಬೇಕೆಂಬ ಉದ್ದೇಶದಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ನೆರವು ನೀಡಲಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿತಿನ್ ರಾಣೆ ಮಾತನಾಡಿ, ಪಕ್ಕದ ಗೋವಾ ರಾಜ್ಯದ ಪ್ರಮುಖ ಆದಾಯ ಮೂಲವೇ ಪ್ರವಾಸೋದ್ಯವಾಗಿದೆ. ಅದೇ ರೀತಿ ನಾವು ಪ್ರವಾಸೋದ್ಯಮದಲ್ಲಿ ಆಸಕ್ತಿ ತೋರಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ ಜಿಲ್ಲೆಯ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಬಹುಮಾನ ವಿತರಣೆ: ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಛಾಯಾಚಿತ್ರ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಛಾಯಾಚಿತ್ರ ಸ್ಫರ್ಧೆಯಲ್ಲಿ ರಾಜಶೇಖರ ನಾಯ್ಕ(ಪ್ರಥಮ), ಅರುಣ ಕುಮಾರ ಕಿಗ್ಗಲ(ದ್ವಿತೀಯ), ಭಕ್ತಿಯಾರ್ ಸಮದ್ ಮಾಂಡ್ಲಿಕ(ತೃತೀಯ), ಪ್ರಬಂಧ ಸ್ಪರ್ಧೆಯಲ್ಲಿ ಪರಿಪೂರ್ಣ ಕಾಮತ(ಪ್ರಥಮ), ಶಾಂತಾ ಹೆಗಡೆ (ದ್ವಿತೀಯ), ನಿತಿನ್ ಗುನಗಿ(ತೃತೀಯ) ಬಹುಮಾನ ನೀಡಿ ಗೌರವಿಸಲಾಯಿತು. ಕಲ್ಪನಾ ರಶ್ಮಿ ಕಲಾಲೋಕ ತಂಡದ ಮಕ್ಕಳು ಭರತನಾಟ್ಯ, ಲಾವಣಿಯಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಬೇಕಲ್, ಕೆ.ಆರ್. ಎಂಟರ್‌ಪ್ರೈಸಸ್ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News