ಶಿವಮೊಗ್ಗ: ಹೆಚ್ಚುತ್ತಿರುವ ಅಪರಾಧ ಕೃತ್ಯಗಳು
ರೇಣುಕೇಶ್. ಬಿ ಶಿವಮೊಗ್ಗ, ಸೆ.27: ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಹಲವೆಡೆ ದಿಢೀರ್ ಆಗಿ ಅಪರಾಧ ಕೃತ್ಯಗಳು ಏರುಗತಿಯಲ್ಲಿ ಸಾಗುತ್ತಿವೆ. ವಿಶೇಷವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳಲ್ಲಿ ಕೆಲ ಕಿಡಿಗೇಡಿಗಳು ನಿರಂತರವಾಗಿ ತೊಡಗುತ್ತಿರುವುದು ಕಂಡುಬರುತ್ತಿದ್ದು, ಇದು ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ. ಹೆಚ್ಚುತ್ತಿರುವ ಕ್ರಿಮಿನಲ್‌ಗಳ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಪೊಲೀಸರ ಕಾರ್ಯ ವೈಖರಿಯ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. ತತ್ತರಿಸಿದ್ದ ಪಾತಕಿಗಳು
ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಎಸ್ಪಿಯಾಗಿ ಆಗಮಿಸಿದ್ದ ಸಂದಭರ್ದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರೌಡಿಸಂ, ಸರಗಳ್ಳತನ, ಮನೆಗಳ್ಳತನ, ದರೋಡೆ, ವಾಹನ ಕಳ್ಳತನ, ಯುವತಿಯರಿಗೆ ಕಿರುಕುಳ, ಸಮಾಜದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುವಂತಹ ದುಷ್ಕೃತ್ಯಗಳು ಸೇರಿದಂತೆ ನಾನಾ ರೀತಿಯ ಅಪರಾಧ ಕೃತ್ಯಗಳು ವಿಪರೀತ ಮಟ್ಟಕ್ಕೆ ತಲುಪಿತ್ತು. ಅದರಲ್ಲಿಯೂ ರಾಜಕೀಯ ಕೃಪಾಪೋಷಿತ ಕ್ರಿಮಿನಲ್‌ಗಳ ಹಾವಳಿ ಹೇಳತೀರದಾಗಿತ್ತು. ಕ್ರಿಮಿನಲ್‌ಗಳಿಗೆ ಪೊಲೀಸರ ಭಯವೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ನಾಗರಿಕರು ಪೊಲೀಸ್ ಇಲಾಖೆಯ ಮೇಲಿದ್ದ ನಂಬಿಕೆಯನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ರವಿ ಡಿ. ಚೆನ್ನಣ್ಣನವರ್ ತಮ್ಮ ನೇರ ನಿರ್ಭೀಡ ಕಾರ್ಯ ವೈಖರಿಯ ಮೂಲಕ ಸಿನಿಮೀಯ ಶೈಲಿಯಲ್ಲಿಯೇ ಕ್ರಿಮಿನಲ್‌ಗಳನ್ನು ಸದೆಬಡಿಯುವ ಕೆಲಸ ಆರಂಭಿಸಿದರು. ತಾವೇ ಖುದ್ದಾಗಿ ನಾಗರಿಕರ ಅಹವಾಲು ಆಲಿಸಿ ಅಪರಾಧಿಗಳ ಬೆನ್ನು ಬಿದ್ದರು. ಮಾರುವೇಷದ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಕೃತ್ಯ ನಡೆಸುವವರ ಎದೆ ನಡುಗುವಂತೆ ಮಾಡಿದರು. ರಾತ್ರಿ-ಹಗಲು ಗಸ್ತು ವ್ಯವಸ್ಥೆ ಬಿಗಿಗೊಳಿಸಿದರು. ಬಾಲ ಬಿಚ್ಚುತ್ತಿದ್ದಾರೆ!
ರವಿ ಡಿ. ಚೆನ್ನಣ್ಣನವರ್ ದಿಢೀರ್ ಆಗಿ ಶಿವಮೊಗ್ಗದಿಂದ ವರ್ಗಾವಣೆಗೊಳ್ಳುತ್ತಿದ್ದಂತೆ ಪಾತಕಿಗಳು ಮತ್ತೆ ಬಾಲ ಬಿಚ್ಚಲಾರಂಭಿಸಿದ್ದಾರೆ. ಹಾಗೆಯೇ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಈ ಹಿಂದಿನ ರೀತಿಯಲ್ಲಿ ‘ನಿರ್ಭೀಡತೆ’ಯಿಂದ ಕೆಲಸ ಮಾಡುತ್ತಿಲ್ಲ. ಇದರಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಅಪರಾಧ ಚಟುವಟಿಕೆಗಳು ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಿವಮೊಗ್ಗ ನಗರದಲ್ಲಿ ‘ನೈತಿಕ ಪೊಲೀಸ್‌ಗಿರಿ’ಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಮತೀಯವಾದಿಗಳು ಸಹಬಾಳ್ವೆ ಹಾಳುಗೆಡವಲು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಮನೆಗಳ ಮುಂಭಾಗದಲ್ಲಿ ನಿಲ್ಲಿಸಿದ ವಾಹನಗಳನ್ನು ಕದ್ದೊಯ್ಯುವ, ಬೆಂಕಿ ಹಚ್ಚುವ ಕೆಲಸಗಳು ಹೆಚ್ಚಾಗುತ್ತಿವೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕ್ರಿಮಿನಲ್‌ಗಳು ಅಟ್ಟಹಾಸದ ಮೇರೆ ಮೀರುವ ಮುನ್ನ ತಹಬದಿಗೆ ತರುವ ಕೆಲಸ ಮಾಡಬೇಕಾಗಿದೆ. ಇಲಾಖೆಯ ಮೇಲೆ ನಾಗರಿಕರಿಗೆ ಭರವಸೆ ಮೂಡಿಸುವ ಕೆಲಸ ಮಾಡಲಿದೆಯೇ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.