ಅಧಿಕಾರಿಗಳ ಕರ್ತವ್ಯ ಲೋಪವೇ ರೆತರ ಸಂಕಷ್ಟಕ್ಕೆ ಕಾರಣ: ಕೆ.ಎನ್. ಹಾಲೇಶಪ್ಪಗೌಡ
ಸೊರಬ, ಸೆ. 27: ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಸಮರ್ಪಕ ವರದಿ ಸಲ್ಲಿಸದ ಪರಿಣಾಮ ಬರದಿಂದ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕೆ.ಎನ್. ಹಾಲೇಶಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸಮರ್ಪಕ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಸರಕಾರ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದರೆ ಸಾಲದು, ಹಲವು ಸಂಕಷ್ಟಗಳ ನಡುವೆಯೇ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆವಿಮೆ ಕಂತನ್ನು ಪಾವತಿಸಿದ್ದಾರೆ. ಆದರೆ ತಾಲೂಕು ಆಡಳಿತ ರೈತರಿಗೆ ಶೇ. 27 ಬೆಳೆ ಪ್ರಯೋಗ ದೃಢೀಕರಣ ಮಾಡಿ ಕಳುಹಿಸಿದ್ದೇವೆ ಎಂದು ಭರವಸೆ ನೀಡಿದ್ದು, ಹಾಲಿ ಕೆಲವು ಭಾಗಗಳಲ್ಲಿ ಬೆಳೆ ಇಳುವರಿ ಸಮೀಕ್ಷೆ ದೋಷ ಯುಕ್ತ ವರದಿ ನೀಡಿದೆ. ಆದ್ದರಿಂದ ತಾಲೂಕಿನ ರೈತರಿಗೆ ಬೆಳೆ ವಿಮೆ ಸಿಗದೆ ಅಧಿಕಾರಿಗಳು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಧ್ಯಕ್ಷ ಜಯಪ್ಪ ಗೌಡ ಮಾತನಾಡಿ, ಕೆಲ ವ್ಯಾಪಾರಿಗಳು ರೈತರ ಹೆಸರಿನಲ್ಲಿ ಆರ್‌ಟಿಸಿ ಪಡೆದು ತಾಲೂಕಿನ ವಿವಿಧೆಡೆಯಿಂದ ಭತ್ತವನ್ನು ಖರೀದಿಸಿ ಅಕ್ರಮವಾಗಿ ತಾಲೂಕಿನ ಎಪಿಎಂಸಿಯಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಎಲ್ಲ್ಲ ವ್ಯವಹಾರಗಳನ್ನು ಪಾರದರ್ಶಕತೆಯಿಂದ ನಡೆಸಬೇಕೆಂದು ಒತ್ತಾಯಿಸಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಬರದ ಛಾಯೆಯಿದೆ. ಸಂಧ್ಯಾ ಸುರಕ್ಷಾ. ವಿಧವಾ ವೇತನ ಸೇರಿದಂತೆ ಕೆಲ ಸರಕಾರದ ಯೋಜನೆಗಳಲ್ಲಿ ಅಧಿಕಾರಿಗಳಿಂದ ಕಮಿಷನ್ ದಂಧೆ ನಡೆಯುತ್ತಿದೆ. ಒಂದು ತಿಂಗಳೊಳಗಾಗಿ ಸರಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಓಟೂರು ಶಿವಪ್ಪ, ವಿಜಯ ಕುಮಾರ್, ಶಿವಪೂಜಪ್ಪ ಗೌಡ, ವೀರಪ್ಪ ಗೌಡ, ಎಂ. ವೇದಮೂರ್ತಿ, ಮೆಹಬೂಬ್ ಬಾಷಾ, ಲೋಕಪ್ಪ, ಹನುಮಂತಪ್ಪ, ಗುತ್ಯಪ್ಪ, ಮುಕುಂದಪ್ಪ, ಸುರೇಶ್ ಮಾಸ್ತರ್, ಸಿ. ಎಸ್. ಬಾಪಟ್, ಎಂ. ದಾನಪ್ಪ, ನಾಗರಾಜ ಗೌಡ, ಈಶ್ವರಪ್ಪ, ದೇವೇಂದ್ರಪ್ಪ, ದೇವರಾಜ್, ಶಿವಾನಂದಪ್ಪ, ಬಂಗಾರಪ್ಪ, ವಿರೂಪಾಕ್ಷಪ್ಪ ಮತ್ತಿತರರಿದ್ದರು.